ಸುರೇಶ್ ಡಿ. ಪಳ್ಳಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬಕ್ಕೆ ನಾಡಿಗೆ ನಾಡೇ ಸಿದ್ಧತೆಯಲ್ಲಿ ತೊಡಗಿರುವಾಗ ಇಲ್ಲೊಂದಿಷ್ಟು ಪುಟಾಣಿ ಕೈಗಳು ಹಬ್ಬದ ಘನತೆ ಹೆಚ್ಚಿಸಲು ನಿತ್ಯ ಹಣತೆಗೆ ಬಣ್ಣ ಹಚ್ಚುತ್ತಿವೆ. ಹಣತೆ ಖರೀದಿಸಿದವರ ಖುಷಿ ನೋಡಿ ಸಂಭ್ರಮಿಸುತ್ತವೆ. ತನ್ನದೇ ಹಣತೆ ಖರೀದಿಸಿದ್ದಾರೆ ಎಂದು ಮನದೊಳಗೆ ಪುಳಕಗೊಳ್ಳುತ್ತವೆ… ಮತ್ತೆ ಮೌನವಾಗಿಬಿಡುತ್ತವೆ!.
ಇವರ್‍ಯಾರೆಂದು ‘ವಿಶೇಷ’ವಾಗಿ ಹೇಳಬೇಕಾಗಿಲ್ಲ.
ಭಿನ್ನ ಸಾಮರ್ಥ್ಯದವರು ಎನ್ನಲು ಮನಸ್ಸು ಒಪ್ಪದು. ವಿಶೇಷ ಸಾಮರ್ಥ್ಯದ ವಿಶೇಷ ಮಕ್ಕಳಿವರು. ಮಂಗಳೂರಿನ ವಿ.ಟಿ.ರಸ್ತೆಯಲ್ಲಿ ಸೇವಾಭಾರತಿಯ ಅಂಗ ಸಂಸ್ಥೆಯಾದ ಚೇತನಾ ಬಾಲ ವಿಕಾಸ ಕೇಂದ್ರದ ಅಂಗಣದೊಳಗೆ ಇವರು ಕಾಣಸಿಗುತ್ತಾರೆ. ಇಲ್ಲಿಗೆ ಭೇಟಿ ನೀಡಿದರೆ ನೀವು ಈ ಮುಗ್ಧ ಮಕ್ಕಳ ಅದ್ಭುತ ಪ್ರಪಂಚವನ್ನು ಕಣ್ತುಂಬಿಕೊಳ್ಳಬಹುದು.
ವಿಶೇಷ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಟೊಂಕ ಕಟ್ಟಿ ನಿಂತಿರುವ ಸೇವಾಭಾರತಿ- ಚೇತನಾ ಬಾಲವಿಕಾಸ ಕೇಂದ್ರ ಕಲಿಕೆಯೊಂದಿಗೆ ಇಲ್ಲಿ ಒಂದಲ್ಲಾ ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಲೇ ಬರುತ್ತಿದೆ. ಬಟ್ಟೆಯ ಕೈಚೀಲ, ಕಾಗದದಿಂದ ಕವರ್ ತಯಾರಿಕೆ, ಗಿಫ್ಟ್ ಕವರ್, ಮೆಡಿಕಲ್ ಕವರ್, ಸ್ಕ್ರೀನ್ ಪೈಂಟಿಂಗ್, ಅಲಂಕಾರಿಕ ಹೂವುಗಳು, ಬಟ್ಟೆಯ ಮ್ಯಾಟ್‌ಗಳು, ಕ್ಯಾಂಡಲ್ ತಯಾರಿಕೆ ಹೀಗೆ ಒಂದಲ್ಲಾ ಒಂದು ಕರಕುಶಲ ವಸ್ತುಗಳ ತಯಾರಿಯಲ್ಲಿ ಇವರು ಕ್ರಿಯಾಶೀಲರಾಗಿರುತ್ತಾರೆ. ಇದೀಗ ದೀಪಾವಳಿ ಸಡಗರವಾದ್ದರಿಂದ ಹಣತೆಗೆ ಆದ್ಯತೆ ನೀಡಲಾಗಿದೆ.
ಇಲ್ಲಿವೆ 25 ಬಗೆಯ ಹಣತೆಗಳು
ಚೇತನಾ ಬಾಲವಿಕಾಸ ಕೇಂದ್ರದಲ್ಲಿ ಒಟ್ಟು ಸೇರಿರುವ ವಿಶೇಷ ಮಕ್ಕಳಲ್ಲಿ ಸುಮಾರು ೨೫ ವೆರೈಟಿಯ ಮಣ್ಣಿನ ಹಣತೆಗಳಿವೆ. ಇವುಗಳಿಗೆ ಆಕರ್ಷಕ ಬಣ್ಣ ತುಂಬುವುದರೊಂದಿಗೆ ಮತ್ತಷ್ಟು ಹೊಳಪು ನೀಡಲಾಗುತ್ತಿದೆ. ಮಕ್ಕಳ ಪೋಷಕರೂ ಕೂಡ ಇದಕ್ಕೆ ಸಾಥ್ ನೀಡುವುದು ವಿಶೇಷ. ಮಾರಾಟವಾದ ಹಣತೆಯಿಂದ ಬಂದ ಲಾಭವನ್ನು ಈ ಮಕ್ಕಳಿಗೆ ಪ್ರತಿ ವರ್ಷಾಂತ್ಯದ ಕಾರ್ಯಕ್ರಮದಲ್ಲಿ ಹಂಚಲಾಗುತ್ತದೆ. ಈ ದಿನಕ್ಕಾಗಿ ಮಕ್ಕಳು ಕಾಯುತ್ತಿರುತ್ತಾರೆ ಎನ್ನುವ ಇಲ್ಲಿನ ಸಿಬ್ಬಂದಿಗಳು ಈ ಮಕ್ಕಳಷ್ಟೇ ಆನಂದ ತುಂದಿಲರಾಗುತ್ತಾರೆ. ಅವರ ತಾಳ್ಮೆ, ಮಕ್ಕಳಲ್ಲಿ ತುಂಬುವ ಉತ್ಸಾಹಕ್ಕೆ ನಾವೆಲ್ಲಾ ತಲೆಬಾಗಲೇಬೇಕು.
ಮಕ್ಕಳ ಸಂಭ್ರಮ ಹೇಳತೀರದು
ಈ ವರ್ಷ ಸುಮಾರು 17ರಿಂದ 18 ಸಾವಿರದಷ್ಟು ಹಣತೆಗಳಿಗೆ ಬಣ್ಣ ಹಚ್ಚುವ ಕಾರ್ಯ ಮಕ್ಕಳಿಂದ ಸಾಗಿದೆ. ಕಳೆದ ವರ್ಷ 13 ಸಾವಿರ ಹಣತೆಗಳಿಗೆ ಹೊಸ ರೂಪ ನೀಡಲಾಗಿತ್ತು. ಈ ಮಕ್ಕಳ ಸಂಭ್ರಮ ಹೇಳತೀರದು ನಮಗೆ ಅದುವೇಖುಷಿ ಎನ್ನುತ್ತಾರೆ ಕೇಂದ್ರದ ತರಬೇತುದಾರರಾದ ಮೀನಾಕ್ಷಿ.
ವಿಶೇಷ ಮಕ್ಕಳಿಗೆ ಕರುಣೆಯಷ್ಟೇ ತೋರಿದರೆ ಸಾಲದು. ಅವರ ನೋವುಗಳಿಗೆ ಸ್ಪಂದಿಸಬೇಕು. ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕು. ಆ ಕಾರ್ಯವನ್ನು ಚೇತನಾ ಬಾಲ ವಿಕಾಸ ಕೇಂದ್ರ ಮಾಡುತ್ತಿದೆ. ಪ್ರತಿದಿನ ಈ ಮಕ್ಕಳಲ್ಲಿ ನವೋಲ್ಲಾಸ ತುಂಬಲು ಇಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ ಎಂದು ಕೇಂದ್ರದ ಸ್ವಯಂ ಸೇವಕ ಗಣರಾಜ ವೈ ಅವರು ಸಂಸ್ಥೆಯ ಕಾರ್ಯಗಳ ಬಗ್ಗೆ ವಿವರ ಒದಗಿಸುತ್ತಾರೆ.
ಕಳೆದ ಮೂರು ತಿಂಗಳಿನಿಂದ ವಿಶೇಷ ಮಕ್ಕಳು ದೀಪಾವಳಿಗಾಗಿ ಹಣತೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬೇರೆ ರಾಜ್ಯಗಳಿಂದಲೂ ಈ ಮಕ್ಕಳ ಹಣತೆಗಾಗಿ ಬೇಡಿಕೆ ಇದೆ. ಅದಕ್ಕಾಗಿ ಹಣತೆ ಶೃಂಗರಿಸುವ ಕಾರ್ಯ ಸಾಗಿದೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಚೇತನಾ ಬಾಲವಿಕಾಸ ಕೇಂದ್ರದ ಮುಖ್ಯ ಶಿಕ್ಷಕಿ ಸುಪ್ರಿತಾ ಅವರು.
ಈ ಬಾರಿ ದೀಪಾವಳಿಯ ದಿನ ಮನೆಯ ಮುಂದೆ ಸಾಲು ಸಾಲು ಹಣತೆ ಹಚ್ಚಬೇಕು ಎಂದಾದರೆ ನೇರವಾಗಿ ಇಲ್ಲಿಗೊಮ್ಮೆ ಬಂದು ಬಿಡಿ. ಮಕ್ಕಳಿಂದ ಬಣ್ಣ ಬಣ್ಣದ ಹಣತೆಕೊಂಡು ಖುಷಿಪಡಿ… ಅವರಿಗೂ ಖುಷಿಯ ಹಂಚಿ. ಅವರು ಕೈ ಕುಲುಕಿ ಹೇಳುವ… ಹೇಳಿಕೊಳ್ಳಲಾಗದ ಭಾವನೆಗಳ ಪರಾಗಕ್ಕೆ ನೀವೂ ಮೌನವಾಗಿ ಸ್ಪಂದಿಸಿಬಿಡಿ!
ಹೀಗೆ ಸಂಪರ್ಕಿಸಿ
ಆಕರ್ಷಕ ರೀತಿಯ ವಿವಿಧ ಗಾತ್ರಗಳ ಹಣತೆಗಳು ರೂ. 10ರಿಂದ 60 ರೂವರೆಗಿನ ದರದಲ್ಲಿ ಇಲ್ಲಿ ಲಭ್ಯ ಇವೆ. ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದಿದ್ದರೆ ಚೇತನಾ ಬಾಲವಿಕಾಸ ಕೇಂದ್ರವನ್ನು ಸಂಪರ್ಕಿಸಬಹುದು. ನವೆಂಬರ್ 1ರವರೆಗೆ ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಕೇಂದ್ರ ಹಣತೆಗಾಗಿ ತೆರೆದಿರಲಿದೆ. ಕೇಂದ್ರದ ಮೊಬೈಲ್ ಸಂಖ್ಯೆ 9449004899
ಚಿತ್ರಗಳು: ರಾಜೇಶ್ ಶೆಟ್ಟಿ ಬಳ್ಳಾಲ್ ಬಾಗ್