ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಮಿಡಿಯನ್ ಕುನಾಲ್ ಕಾಮ್ರಾ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಕುನಾಲ್ ಕಾಮ್ರಾ ತಮ್ಮ ಇತ್ತೀಚಿನ ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಪರೋಕ್ಷವಾಗಿ `ಗದ್ದಾರ್’ (ದ್ರೋಹಿ) ಎಂದು ಕರೆದಿದ್ದರು.
ಈ ಘಟನೆಯ ಬಳಿಕ, ಶಿವಸೇನೆ ಶಾಸಕ ಮುರ್ಜಿ ಪಟೇಲ್ ಅವರು ಕಾಮ್ರಾ ವಿರುದ್ಧ ದೂರು ದಾಖಲಿದ್ದರು. ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(1)(ಬಿ) (ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣವಾಗುವ ಹೇಳಿಕೆ) ಮತ್ತು 356(2) (ಮಾನಹಾನಿ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ವಿವಾದ ತಾರಕಕ್ಕೇರಿದ ನಂತರ ಕಾಮ್ರಾ ತಮಿಳುನಾಡಿನಲ್ಲಿ ಇರುವ ಕಾರಣ ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಮಾ. 28ರಂದು ಮದ್ರಾಸ್ ಹೈಕೋರ್ಟ್ ಅವರಿಗೆ ಏ. 7ವರೆಗೆ ಮಧ್ಯಂತರ ಪೂರ್ವಭಾವಿ ಜಾಮೀನು ಮಂಜೂರು ಮಾಡಿತ್ತು. ಆದರೆ, ಈ ಅವಧಿ ಮುಗಿದ ನಂತರ, ಕಾಮ್ರಾ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಗೊಳಿಸಲು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಏ. 21ರಂದು ನ್ಯಾ.ಸಾರಂಗ್ ಕೊತ್ವಾಲ್ ಮತ್ತು ಶ್ರೀರಾಮ್ ಎಂ. ಮೊದಕ್ ಅವರ ಪೀಠದ ಮುಂದೆ ವಿಚಾರಣೆಗೆ ಬರಲಿದೆ.