ಮೇ 31ರಂದು ಭಾರತಕ್ಕೆ ಬರುವೆ: ವಿದೇಶದಿಂದಲೇ ಪ್ರಜ್ವಲ್‌ ರೇವಣ್ಣ ವಿಡಿಯೋ ಮೆಸೇಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್‌ ರೇವಣ್ಣ ಕೂಡಲೇ ಕರ್ನಾಟಕಕ್ಕೆ ಬಂದು, ನೆಲದ ಕಾನೂನು ಗೌರವಿಸಬೇಕು ಎಂದು ಅಜ್ಜ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಬಹಿರಂಗ ಪತ್ರ ಬರೆದ ಬೆನ್ನಲ್ಲೇ ಪ್ರಜ್ವಲ್‌ ರೇವಣ್ಣ ಅವರು ಭಾರತಕ್ಕೆ ಬರುವುದಾಗಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಪ್ರಜ್ವಲ್‌ ರೇವಣ್ಣ ಅವರು ಹೊಸ ವಿಡಿಯೊ ಬಿಡುಗಡೆ ಮಾಡಿದ್ದು, ಮೇ 31ರಂದು ಭಾರತಕ್ಕೆ ಬಂದು ವಿಚಾರಣೆಗೆ ಹಾಜರಾಗುವುದಾಗಿ ಘೋಷಣೆ ಮಾಡಿದ್ದಾರೆ.

‘ನಾನು ಎಲ್ಲಿದ್ದೇನೆ ಎಂಬ ಮಾಹಿತಿ ನೀಡಲು ಬಂದಿದ್ದೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ರೂಪಿಸಲಾಗಿದೆ. ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ಇಷ್ಟಾದರೂ ನಾನು ನನ್ನ ತಾತ, ಜೆಡಿಎಸ್‌ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ಆದರೂ, ನಾನು ಭಾರತಕ್ಕೆ ಬಂದು ವಿಚಾರಣೆ ಎದುರಿಸುತ್ತೇನೆ’ ಎಂಬುದಾಗಿ ಪ್ರಜ್ವಲ್‌ ರೇವಣ್ಣ ವಿಡಿಯೊದಲ್ಲಿ ತಿಳಿಸಿದ್ದಾರೆ.

ನಾನು ಫಾರಿನ್‌ನಲ್ಲಿ ಎಲ್ಲಿದ್ದೇನೆ ಎಂದು ಮಾಹಿತಿ ಕೊಡದಿರುವುದಕ್ಕೆ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ನಾನು ಮತದಾನ ಮಾಡಿ ವಿದೇಶಕ್ಕೆ ಹೋಗುವ ದಿನ ನನ್ನ ಮೇಲೆ ಯಾವುದೇ ಪ್ರಕರಣವೂ ದಾಖಲಾಗಿರಲಿಲ್ಲ. ಎಸ್‌ಐಟಿ ಕೂಡ ರಚನೆ ಆಗಿರಲಿಲ್ಲ. ಏ.26ರಂದು ನಾನು ವಿದೇಶಕ್ಕೆ ಹೋಗುವುದು ಕೂಡ ಪೂರ್ವ ನಿರ್ಧರಿತವಾಗಿರುತ್ತದೆ. ವಿದೇಶದಲ್ಲಿ ಉಳಿದುಕೊಂಡು ಮೂರ್ನಾಲ್ಕು ದಿನದ ಬಳಿಕ ಯೂಟ್ಯೂಬ್‌ನಲ್ಲಿ ನ್ಯೂಸ್ ಚಾನೆಲ್ ನೋಡುವ ವೇಳೆ ಈ ಮಾಹಿತಿ ನನಗೆ ತಿಳಿದುಬಂದಿತು. ಇದಾದ ನಂತರ ಎಸ್ಐಟಿ ಕೂಡ ನನಗೆ ನೋಟಿಸ್ ಕೊಡುವ ಕೆಲಸ ಮಾಡಿತು.ಎಸ್‌ಐಟಿ ನೋಟಿಸ್‌ಗೆ ಎಕ್ಸ್‌ ಖಾತೆ ಮತ್ತು ನಮ್ಮ ಲಾಯರ್ ಮೂಲಕ ವಿಚಾರಣೆಗೆ ಹಾಜರಾಜಲು 7 ದಿನಗಳ ಕಾಲಾವಕಾಶ ಕೇಳಿದ್ದೆನು.

ಈ ಏಳು ದಿನ ಸಮಯಾವಕಾಶ ಕೇಳಿದ ನಂತರ ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ಅನೇಕರು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾತನಾಡುವುದನ್ನು ನಾನು ನೋಡಿದೆ. ಇದೆಲ್ಲವನ್ನು ನೋಡಿ ನಾನು ಡಿಪ್ರೆಶನ್‌ಗೆ ಒಳಗಾಗಿ, ಒಂದೆಡೆ ಐಸೋಲೇಷನ್‌ಗೆ ಒಳಗಾಗಿದ್ದೆನು. ಇದರಿಂದಾಗಿ ನಿಮ್ಮೆಲ್ಲರ ಮುಂದೆ ನಾನು ಕ್ಷಮೆ ಕೇಳುತ್ತೇನೆ.

ಇದಾದ ನಂತರ ಹಾಸನದಲ್ಲಿ ಎಲ್ಲ ನನ್ನ ವಿರುದ್ಧದ ಶಕ್ತಿಗಳು ಒಟ್ಟುಗೂಡಿಕೊಂಡು ಪಿತೂರಿ ಮಾಡುವ ಕೆಲಸವನ್ನು ಮಾಡಿದ್ದಾರೆ. ರಾಜಕೀಯವಾಗಿ ನಾನೇನು ಬೆಳೆಯುತ್ತಿದ್ದೇನೆ, ಅದನ್ನು ಮುಗಿಸಬೇಕು ಎಂಬ ನಿಟ್ಟಿನಲ್ಲಿ ನನ್ನನ್ನು ಏನೇನೋ ಪ್ರಕರಣಗಳಲ್ಲಿ ಸಿಲುಕಿಸುವ ಕೆಲಸ ಮಾಡಿದ್ದಾರೆ. ಇದರಿಂದ ನಾನು ಮತ್ತಷ್ಟು ಆಘಾತಕ್ಕೆ ಒಳಗಾಗಿದ್ದೇನೆ.

ಈ ಘಟನೆಯಿಂದ ಯಾರೂ ಕೂಡ ಅನ್ಯಥಾ ಭಾವಿಸುವುದು ಬೇಡ. ನಾನೇ ಸ್ವತಃ ಶುಕ್ರವಾರ ಮೇ 31ರಂದು ಎಸ್‌ಯಟಿ ಮುಂದೆ ಬಂದು ಸಂಪೂರ್ಣವಾಗಿ ಪ್ರಕರಣದ ತನಿಖೆಯಲ್ಲಿ ಭಾಗಿಯಾಗುತ್ತೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ನನ್ನ ಮೇಲೆ ದಾಖಲಾಗಿರುವಂತಹ ಸುಳ್ಳು ಪ್ರಕರಣಗಳಿಂದ ಮುಕ್ತವಾಗಿ ಹೊರಗೆ ಬರುವ ವಿಶ್ವಾಸವಿದೆ. ನನ್ನ ಮೇಲೆ ದೇವರು, ಜನರು ಹಾಗೂ ಕುಟುಂಬದ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತೇನೆ. ನಾನು ಮೇ 31ರಂದು ಬಂದು ಈ ಎಲ್ಲ ಪ್ರಹಸನಗಳಿಗೆ ತೆರೆ ಎಳೆಯುತ್ತೇನೆ ಎಂದು ವಿದೇಶದಲ್ಲಿ ಕುಳಿತು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ಅನ್ನು ರದ್ದುಗೊಳಿಸಬೇಕು ಎಂದು ಸಿದ್ದರಾಮಯ್ಯ ಅವರು ಎರಡು ಬಾರಿ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ಇನ್ನು, ಇದರ ಭಾಗವಾಗಿಯೇ ಕೇಂದ್ರ ಸರ್ಕಾರವು ಪ್ರತಿಕ್ರಿಯೆ ಕೋರಿ ಪ್ರಜ್ವಲ್‌ ರೇವಣ್ಣಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ. ಶೋಕಾಸ್‌ ನೋಟಿಸ್‌ಗೂ ಉತ್ತರ ನೀಡದಿದ್ದರೆ, ಕೇಂದ್ರ ಸರ್ಕಾರವು ಪಾಸ್‌ಪೋರ್ಟ್‌ ರದ್ದುಗೊಳಿಸಲಿದೆ ಎಂದು ಹೇಳಲಾಗುತ್ತಿತ್ತು. ಇದರ ಬೆನ್ನಲ್ಲೇ ಪ್ರಜ್ವಲ್‌ ರೇವಣ್ಣ ಅವರು ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!