ಹೊಸದಿಗಂತ ವರದಿ,ನಾಗಮಂಗಲ:
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 9ನೇ ವರ್ಷದ ಸಂಸ್ಮರಣಾ ಮಹೋತ್ಸವ ಹಾಗೂ 77ನೇ ಜಯಂತ್ಯುತ್ಸವ ಅಂಗವಾಗಿ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನಿಧ್ಯದಲ್ಲಿ ಹೋಮ, ಹವನಾದಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.
ಬುಧವಾರ ರಾತ್ರಿಯಿಂದ ಗಣಪತಿ ಹೋಮ. ಚಂಡಿಕಾ ಹೋಮ ಸೇರಿದಂತೆ ಹಲವು ಬಗೆಯ ಪೂಜಾ ಕಾರ್ಯಕ್ರಮಗಳು ನಡೆದವು. ಆದಿಚುಂಚನಗಿರಿ ಶಾಖಾ ಮಠದ ಸಾಧು-ಸಂತರು ಹಾಗೂ ಅನೇಕ ಭಕ್ತರು ಹಾಜರಿದ್ದರು. ಗುರುವಾರ ಮಧ್ಯಾಹ್ನದವರೆಗೂ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ಜರುಗಿದವು.
ಕ್ಷೇತ್ರದ ಅಧಿದೇವತೆಗಳಾದ ಶ್ರೀ ಕಾಲಭೈರವೇಶ್ವರ, ಗಂಗಾಧರೇಶ್ವರಸ್ವಾಮಿ ಸೇರಿದಂತೆ ಎಲ್ಲಾ ದೇವಾಲಯಗಳಿಗೂ ತಳಿರು ತೋರಣಗಳೊಂದಿಗೆ ಹಸಿರು ಚಪ್ಪರ ಹಾಕಿ, ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಮಹಾಸಮಾಧಿಗೂ ಅಲಂಕಾರ ಮಾಡಿ ಪೂಜೆ ಸಲ್ಲಿಸುವ ಮೂಲಕ ಶ್ರೀಗುರುವಿಗೆ ನಮಿಸಿದರು. ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಸೇರಿದಂತೆ ಅನೇಕ ಸಾಧುಸಂತರು ಮತ್ತು ಭಕ್ತರು ಹಾಜರಿದ್ದರು.