ಹೊಸದಿಗಂತ ವರದಿ,ಕೊಪ್ಪಳ:
ಆಳೆತ್ತರದ ವ್ಯಕ್ತಿತ್ವ, ಸಮುದ್ರದಂತಹ ಗಾಂಭೀರ್ಯತೆಯನ್ನು ಹೊಂದಿರುವ ಸರ್ವ ಕ್ಷೇತ್ರದಲ್ಲಿ ಹೆಜ್ಜೆಗುರುತನ್ನು ಸ್ಥಾಪಿಸಿ ಶತಾಯುಷಿಯಾಗಿ ಮೆರೆದ ಕವಿ ಕಯ್ಯಾರ ಕಿಞ್ಞಣ್ಣರೈಯವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಉದ್ಘಾಟಕನಾಗಿ ಭಾಗವಹಿಸುವುದಕ್ಕೆ ಧನ್ಯತೆಯಿದೆ ಎಂದು ಖ್ಯಾತ ಸಾಹಿತಿ, ನಿವೃತ್ತ ಪ್ರಾಂಶುಪಾಲರಾದ ಪ್ರೊ. ಪಿ.ಎನ್.ಮೂಡಿತ್ತಾಯ ಹೇಳಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಆಯೋಜಿಸಿರುವ ನಾಡೋಜ ಕಯ್ಯಾರರ ಕವನ, ಕಥಾಸಂಚಿಕೆಗಳಿಂದ ಆಯ್ದ ಭಾಗದ ಚಿಂತನ ಮಂಥನ ಮತ್ತು ಸಂಸ್ಮರಣೆ ಕಾರ್ಯಕ್ರಮವನ್ನು ಅವರು ದೀಪಬೆಳಗಿಸಿ ಚಾಲನೆಯನ್ನು ನೀಡಿದರು. ಇಂತಹ ಸುಂದರ ಪರಿಸರದಲ್ಲಿ ಮಕ್ಕಳನ್ನೂ ಒಳಗೊಂಡು ಸಾಧಕರ ಹಿರಿಯರ ಸಾಧನೆಗಳ ಬಗ್ಗೆ ಮುಂದಿನ ಪೀಳಿಗೆಗೆ ಮಾರ್ಗದರ್ಶನಪ್ರಾಯವೂ ಆಗಿರುವ ಕಾರ್ಯಕ್ರಮ ಇದಾಗಿದೆ ಎಂದರು.
ಸಾಹಿತಿ, ನಿವೃತ್ತ ಪ್ರಾಧ್ಯಾಪಕರಾಗಿರುವ ಡಾ. ಪ್ರಮೀಳ ಮಾಧವ ರಾಮಾಯಣ ಹಾಗೂ ಮಹಾಭಾರತದ ಊರ್ಮಿಳೆ, ಕರ್ಣ, ಕುಂತಿ ಮೊದಲಾದ ಪಾತ್ರಗಳ ಬಗ್ಗೆ ಕಯ್ಯಾರರು ತನ್ನ ಕವಿಭಾವವನ್ನು ವರ್ಣಿಸಿದ ವಿಧಾನಗಳನ್ನು ಸವಿವರವಾಗಿ ಚಿಂತನೆಗೆ ಹಚ್ಚಿದರು. ಹಾಗೂ ಮಕ್ಕಳಿಗಾಗಿ ಕಯ್ಯಾರರು ಬರೆದ ಸುಂದರ ಅರ್ಥಗರ್ಭೀತವಾದ ಪದ್ಯಗಳ ಸಾಲುಗಳನ್ನು ಬಿತ್ತರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷ ಎಸ್.ವಿ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವೈದ್ಯ ಸಾಹಿತಿ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಸಂಸ್ಮರಣೆ ಭಾಷಣ ಮಾಡಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಮಂಗಳೂರು ಆರ್ಟ್ ಕೆನರಾ ಟ್ರಸ್ಟ್ ಸಂಚಾಲಕ ನೇಮಿರಾಜ ಶೆಟ್ಟಿ, ಕವಿತಾ ಕುಟೀರದ ಅಧ್ಯಕ್ಷ, ನಿವೃತ್ತ ಬ್ಯಾಂಕ್ ಪ್ರಬಂಧಕ ದುರ್ಗಾಪ್ರಸಾದ ರೈ ಕೆ. ಶುಭಕೋರಿದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯೆ ವಿದ್ಯಾವಾಣಿ ಮಠದಮೂಲೆ ಸ್ವಾಗತಿಸಿ, ಕಸಾಪ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಡಿ.ಬಿ. ವಂದಿಸಿದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಅಧ್ಯಾಪಿಕೆ ರಶ್ಮಿ ಪೆರ್ಮುಖ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರು ನಾಡಗೀತೆಯನ್ನು ಪ್ರಸ್ತುತಪಡಿಸಿದರು.
ಪೇಟೆಯ ವೃತ್ತಕ್ಕೆ ಕಯ್ಯಾರರ ಹೆಸರಿಡಲು ಠರಾವು ಮಂಡನೆ :
ಇದೇ ಸಂದರ್ಭದಲ್ಲಿ ಬದಿಯಡ್ಕ ಮೇಲಿನ ಪೇಟೆಯ ವೃತ್ತಕ್ಕೆ ಕಯ್ಯಾರರ ಹೆಸರಿಡುವಂತೆ ಆಗ್ರಹಿಸಿ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಠರಾವು ಮಂಡಿಸಿದರು. ಕಾರ್ಯಕ್ರಮದಲ್ಲಿ ಕಯ್ಯಾರರ ಅಭಿಮಾನಿಗಳು, ಶಾಲಾ ಮಕ್ಕಳು, ಪಾಲಕರು ಪಾಲ್ಗೊಂಡಿದ್ದರು.