ಭಾರತೀಯ ರೈಲ್ವೇಯಿಂದ 18 ದಿನಗಳ ‘ಶ್ರೀ ರಾಮಾಯಣ ಯಾತ್ರೆ’ ಪ್ರಾರಂಭ: ಯಾವಾಗ? ಯಾವ್ಯಾವ ಸ್ಥಳಗಳು ಗೊತ್ತೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಶ್ರೀ ರಾಮನ ಜೀವನದ ಕುರಿತು ಪವಿತ್ರ ಸ್ಥಳಗಳಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯಲು ಜೂನ್ 21 ರಂದು ವಿಶೇಷ ಪ್ರವಾಸಿ ರೈರು ‘ಶ್ರೀ ರಾಮಾಯಣ ಯಾತ್ರೆ’ ಪ್ರಾರಂಭಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ .
ಜೂನ್ 21 ರಂದು ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭವಾಗುವ 18 ದಿನಗಳ ‘ಭಾರತ್ ಗೌರವ್ ಟೂರಿಸ್ಟ್ ಟ್ರೈನ್’ ರಾಮಾಯಣ ಸರ್ಕ್ಯೂಟ್‌ನಲ್ಲಿ ಪ್ರವಾಸಕ್ಕಾಗಿ ಬುಕ್ಕಿಂಗ್ ನಡೆಯುತ್ತಿದೆ ಎಂದು ಲಕ್ನೋದ IRCTC ಯ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಅಜಿತ್ ಕುಮಾರ್ ಸಿನ್ಹಾ ತಿಳಿಸಿದರು.
ಈ ರೈಲಿನಲ್ಲಿ ಸುಮಾರು 600 ಪ್ರಯಾಣಿಕರ ವಸತಿ ಸಾಮರ್ಥ್ಯದ 11 ಥರ್ಡ್ ಎಸಿ ದರ್ಜೆಯ ಕೋಚ್‌ ಇದ್ದು, ರೈಲಿನ 18 ದಿನಗಳ ಪ್ರಯಾಣಕ್ಕೆ ಪ್ರಯಾಣಿಕರಿಗೆ 62,370 ರೂ ವೆಚ್ಚವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
14 ವರ್ಷಗಳ ಕಾಲ ಕಾಡಿನಲ್ಲಿ ವನವಾಸವನ್ನು ಕೈಗೊಂಡಾಗ ಭಗವಾನ್ ರಾಮ, ಅವರ ಪತ್ನಿ ಸೀತಾ ದೇವಿ ಮತ್ತು ಲಕ್ಷ್ಮಣರು ಕಾಲಿಟ್ಟ ಸ್ಥಳಗಳಿಗೆ ಭೇಟಿ ನೀಡುವ ಭಕ್ತರ ಕನಸುಗಳನ್ನು ಸಾಕಾರಗೊಳಿಸುವ ಗುರಿಯನ್ನು ಈ ಪ್ರವಾಸ ಪ್ಯಾಕೇಜ್ ಹೊಂದಿದೆ.
ಅಯೋಧ್ಯೆ, ಜನಕ್‌ಪುರ (ನೇಪಾಳ), ಸೀತಾಮರ್ಹಿ, ಬಕ್ಸರ್, ವಾರಣಾಸಿ, ಪ್ರಯಾಗ್‌ರಾಜ್, ಶೃಂಗವೇರಪುರ, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಾಂಚೀಪುರಂ ಮತ್ತು ಭದ್ರಾಚಲಂ ಒಳಗೊಂಡಿರುವ ಪ್ರಮುಖ ಸ್ಥಳಗಳನ್ನು ಒಳಗೊಂಡಿರುವ ಸ್ವದೇಶ್ ದರ್ಶನ್ ಯೋಜನೆಯಡಿ ಗುರುತಿಸಲಾದ ರಾಮಾಯಣ ಸರ್ಕ್ಯೂಟ್‌ನಲ್ಲಿ ರೈಲು ಚಲಿಸುತ್ತದೆ.

ಈ ಮೂಲಕ ಮೊದಲ ಬಾರಿಗೆ ಭಾರತದಿಂದ ನೇಪಾಳಕ್ಕೆ ಪ್ರವಾಸಿ ರೈಲು ಹೋಗಲಿದೆ ಮತ್ತು ಎರಡು ಧಾರ್ಮಿಕ ನಗರಗಳಾದ ಅಯೋಧ್ಯೆ ಮತ್ತು ಜನಕ್‌ಪುರವನ್ನು ಸಂಪರ್ಕಿಸಲಿದೆ . ದೆಹಲಿಯ ಹೊರತಾಗಿ ಬೋರ್ಡಿಂಗ್ ಪಾಯಿಂಟ್‌ಗಳು ಅಲಿಗಢ್, ತುಂಡ್ಲಾ, ಕಾನ್ಪುರ್ ಮತ್ತು ಲಕ್ನೋ,ಇದ್ದು, ಪ್ರಯಾಣಿಕರು ಯಾವ ನಿಲ್ದಾಣದಿಂದ ಪ್ರಯಾಣಿಸುವರು ಎಂಬುದನ್ನು ಲೆಕ್ಕಿಸದೆ ಟಿಕೆಟ್‌ನ ವೆಚ್ಚವು ಏಕರೂಪವಾಗಿರುತ್ತದೆ.

ಪ್ರವಾಸದ ಯೋಜನೆಯು ಆಹಾರ, ಹೋಟೆಲ್‌ನಲ್ಲಿ ಉಳಿಯುವುದು ಮತ್ತು ಭೇಟಿ ನೀಡುವ ಸ್ಥಳಗಳಲ್ಲಿ ಮಾರ್ಗದರ್ಶಿ ಸೇವೆಗಳನ್ನು ಒಳಗೊಂಡಿರುತ್ತದೆ . ಸುಮಾರು 8,000 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸುವ ತನ್ನ ಪ್ರಯಾಣದ 18 ನೇ ದಿನದಂದು ದೆಹಲಿಗೆ ಹಿಂದಿರುಗುವ ಭಾರತ್ ಗೌರವ್ ಟೂರಿಸ್ಟ್ ರೈಲಿನ ಒಳಾಂಗಣವು ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ 50 ಪ್ರತಿಶತ ಪ್ರಯಾಣಿಕರಿಗೆ ಪ್ರಯಾಣ ದರದಲ್ಲಿ 5 ಪ್ರತಿಶತದಷ್ಟು ಆರಂಭಿಕ ರಿಯಾಯಿತಿಯನ್ನು ನೀಡಲಾಗುತ್ತದೆ.IRCTC ನೀಡಿದ EMI ಪಾವತಿ ಆಯ್ಕೆಯು ಸಹ ಇದೆ ಎಂದು ಸಿನ್ಹಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!