ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಚುನಾವಣೆ ಪ್ರಚಾರ ಅಖಾಡದಲ್ಲಿ ರಾಮಾಯಣದ ಹೋಲಿಕೆ ರಾಜಕೀಯ ಜೋರಾಗಿದೆ. ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಬಿಜೆಪಿಯನ್ನು ರಾಮಾಯಣದ ಮಾಯಾ ಜಿಂಕೆಗೆ ಹೋಲಿಸಿರುವುದು ಬಿಜೆಪಿಯನ್ನು ಕೆರಳಿಸಿದೆ.
ಪ್ರಚಾರದ ವೇಳೆ ವಿಶ್ವಾಸ್ ನಗರದ ಸ್ಲಂ ಕ್ಲಸ್ಟರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ರಾವಣನ ‘ಚಿನ್ನದ ಜಿಂಕೆ’ ತಂತ್ರಕ್ಕೆ ಸೀತಾ ದೇವಿ ಬಲಿಯಾದ ರಾಮಾಯಣದ ಘಟನೆಯನ್ನು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದರು.
ಕೇಜ್ರಿವಾಲ್ ಹೇಳಿದ್ದೇನು?
ರಾಮನು 14 ವರ್ಷಗಳ ಕಾಲ ವನವಾಸದಲ್ಲಿದ್ದನು, ಆದ್ದರಿಂದ ಅವನು ಒಂದು ದಿನ ಆಹಾರದ ವ್ಯವಸ್ಥೆ ಮಾಡಲು ಕಾಡಿಗೆ ಹೋದನು, ಪತ್ನಿಯನ್ನು ಗುಡಿಸಲಿನಲ್ಲಿ ಬಿಟ್ಟು ಲಕ್ಷ್ಮಣನಿಗೆ ಸೀತಾ ಮಾತೆಯನ್ನು ನೀನು ರಕ್ಷಿಸು ಎಂದು ಹೇಳಿದನು, ಅಷ್ಟರಲ್ಲಿ ರಾವಣನು ಚಿನ್ನದ ಜಿಂಕೆಯ ರೂಪದಲ್ಲಿ ಬಂದನು. ನನಗೆ ಈ ಜಿಂಕೆ ಬೇಕು ಎಂದು ಸೀತೆಯು ಲಕ್ಷ್ಮಣನಿಗೆ ಹೇಳಿದಳು… ಲಕ್ಷ್ಮಣನು ಅದಕ್ಕಾಗಿ ಹೋದ ಸಮಯದಲ್ಲಿ ರಾವಣನು ಸೀತಾ ಮಾತೆಯನ್ನು ಅಪಹರಿಸಿದನು, ಬಿಜೆಪಿಯವರು ಕೂಡ ಆ ಚಿನ್ನದ ಜಿಂಕೆಯಂತೆಯೇ ಇದ್ದಾರೆ, ಅವರ ಬಲೆಗೆ ಬೀಳಬೇಡಿ ಎಂದು ಕೇಜ್ರಿವಾಲ್ ಹೇಳಿದರು.
ಕೇಜ್ರಿವಾಲ್ ಹೇಳಿಕೆಗೆ ಕೆರಳಿದ ಬಿಜೆಪಿ
ಕೇಜ್ರಿವಾಲ್ ಅವರ ಹೇಳಿಕೆಗಳು ಬಿಜೆಪಿಯ ಕೋಪಕ್ಕೆ ಕಾರಣವಾಗಿದ್ದು, ಅವರು ಸನಾತನ ಧರ್ಮವನ್ನು ಅವಮಾನಿಸಿದ್ದಾರೆ. ರಾಮಚರಿತಮಾನಗಳ ಪವಿತ್ರ ಗ್ರಂಥವನ್ನು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಆರೋಪಿಸಿ ಅವರನ್ನು ಚುನಾವಣೆಗಾಗಿ ಮಾತ್ರ ಹಿಂದು ಆಗುತ್ತಾರೆ (ಚುನವಿ ಹಿಂದು) ಎಂದು ಲೇವಡಿ ಮಾಡಿದ್ದಾರೆ. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಚುನಾವಣೆ ಸಮೀಪಿಸಿದಾಗ ಮಾತ್ರ ಕೇಜ್ರಿವಾಲ್ ದೇವಸ್ಥಾನಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.