ಹೊಸ ದಿಗಂತ ವರದಿ, ಹಾವೇರಿ:
ಪೈಪೋಟಿ ಮಾಡುವ ಎದುರಾಳಿಗಳೆಲ್ಲ ನಮಗೆ ಎದುರಾಳಿಗಳೇ. ಎದುರಾಳಿಗಳಲ್ಲಿ ಸಣ್ಣವರು ದೊಡ್ಡವರು ಎಂದು ನಾವು ಕಾಣುವುದಿಲ್ಲ. ಎಲ್ಲರನ್ನು ಸಮಾನವಾಗಿ ತಗೆದುಕೊಳ್ಳುತ್ತೇವೆ. ಎದುರಾಳಿಗಳಿದ್ದಾಗಲೇ ಚುಣಾವಣೆ ರಂಗೇರುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಶಿಗ್ಗಾವದಲ್ಲಿ ಶನಿವಾರ ತಹಶೀಲ್ದಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ನನ್ನ ಕ್ಷೇತ್ರದ ಜನತೆಯ ಮೇಲೆ ವಿಶ್ವಾಸವಿದೆ. ಶಿಗ್ಗಾವ ಮತ ಕ್ಷೇತ್ರದ ಜನತೆ ನನಗೆ ಹಲವು ಬಾರಿ ಅಭೂತಪೂರ್ವ ಬೆಂಬಲವನ್ನು ಕೊಟ್ಟಿದ್ದಾರೆ. ಈ ಬಾರಿ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಹೆಚ್ಚಿನ ಮತಗಳಿಂದ ಆಯ್ಕೆ ಆಗುತ್ತೇನೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು.
ಶಿಗ್ಗಾವ್ ಮತ ಕ್ಷೇತ್ರದ ಜನತೆ ಬಹಳ ಪ್ರಭುದ್ಧರಾಗಿದ್ದಾರೆ. ಅವರು ಅಭಿವೃದ್ಧಿಪರ ಮತ ಚಲಾಯಿಸಲಿದ್ದಾರೆ. ಹಿದೆಂದಿಗಿಂದ ಈ ಬಾರಿ ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಾಗಿದೆ. ಜನತೆ ಅಭಿವೃದ್ಧಿ ಕಾರ್ಯಗಳನ್ನೆಲ್ಲ ಗಮನಿಸಿದ್ದಾರೆ ಹೀಗಾಗಿ ಅವರು ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲಿದ್ದಾರೆ ಎಂದರು.
ಕ್ಷೇತ್ರದಲ್ಲಿನ ಜನತೆಗೆ ಉದ್ಯೋಗ ನೀಡುವುದಕ್ಕಾಗಿ ಟೆಕ್ಸ್‌ಟೈಲ್ ಪಾರ್ಕ್, ಐಐಟಿ, ಜಿಟಿಟಿಸಿ, ತಾಯಿ ಮಕ್ಕಳ ಆಸ್ಪತ್ರೆ, ಆಯುರ್ವೇದಿಕ್ ಆಸ್ಪತ್ರೆ, 250 ಹಾಸಿಗೆಯ ಆಸ್ಪತ್ರೆ ಸೇರಿದಂತೆ ಇನ್ನು ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಮೂಲಕ ಈ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಲಾಗಿದೆ ಹಿಗಾಗಿ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಿನ ಬೆಂಬಲ ನೀಡುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ನಮ್ಮದು ಆಡಳಿತ ಪಕ್ಷವಾಗಿರುವುದರಿಂದ ಆಕಾಂಕ್ಷಿಗಳು ಬಹಳ ಇದ್ದಾರೆ. ಹಲವು ಹಾಲಿ ಶಾಸಕರನ್ನು ಬದಲಾವಣೆ ಮಾಡಿದಾಗ ಬಂಡಾಯ ಸಹಜ. ಎರಡು ಮೂರು ದಿನಗಳಲ್ಲಿ ಎಲ್ಲವೂ ಶಮನವಾಗುತ್ತದೆ. ಸದ್ಯದಲ್ಲಿಯೇ ಈ ಕೊನೆಯ ಪಟ್ಟಿ ಬಿಡುಗಡೆಯಾಗಲಿದೆ ಎಂದರು.
ಚುನಾವಣೆ ಎಂದರೆ ಕುಸ್ತಿ ಕಣ ಎಂದು ಮಾಧ್ಯಮಗಳಲ್ಲಿನ ಮಾತನ್ನು ನಾನು ಎರವಲು ಪಡೆದುಕೊಂಡು ಈ ಹಿಂದೆ ಕುಸ್ತಿಗೆ ಬನ್ನಿ ಎಂಬ ಹೇಳಿಕೆ ನೀಡಿದ್ದೆ. ನನ್ನ ಕ್ಷೇತ್ರದಲ್ಲಿ ಎದುರಾಳಿ ಯಾರೇ ಬರಲಿ, ಪ್ರತಿಸ್ಪರ್ಧಿ ಗಟ್ಟಿಯಾಗಿದ್ದರೆ ಚುನಾವಣೆ ಚೆನ್ನಾಗಿ ನಡೆಯುತ್ತದೆ. ನನ್ನ ವಿಶ್ವಾಸ ನನ್ನ ಕ್ಷೇತ್ರದ ಜನರ ಮೇಲಿದೆ. ಹತ್ತು ಹಲವರು ಪೈಪೋಟಿ ಮಾಡಿದರು, ಜನರು ನನಗೆ ಬೆಂಬಲ ಕೊಡುತ್ತಾರೆ ಎಂದರು.
ನೆಹರು ಓಲೇಕಾರ ನನ್ನ ಮೇಲೆ ಆರೋಪ ಮಾಡಿದ್ದನ್ನು ಸಾಬೀತು ಮಾಡಲಿ. ನಾನು ಎಲ್ಲದಕ್ಕೂ ಸಿದ್ದನಿದ್ದೇನೆ. ಆದರೆ, ಓಲೇಕಾರ ಅವರು ಅವರ ಮೇಲಿರುವ ಆರೋಪಗಳ ಬಗ್ಗೆ ಮೊದಲು ಸ್ಪಷ್ಠೀಕರಣ ಕೊಡಲಿ ಎಂದರು.