ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಪರಿಷತ್ ಕಲಾಪದಲ್ಲೇ ಸಿ.ಟಿ. ರವಿ ತಮ್ಮ ವಿರುದ್ಧ ಅಶ್ಲೀಲ ಪದ ಬಳಸಿದ್ದಾರೆ ಅಂತ ಗಂಭೀರ ಆರೋಪ ಮಾಡಿರುವ ಸಚಿವೆಲಕ್ಷ್ಮಿ ಹೆಬ್ಬಾಳ್ಕರ್, ಸಿಟಿ ರವಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅತ್ತ ಸಿಟಿ ರವಿ ತಾನು ಅಂತಹ ಪದ ಬಳಸಿಯೇ ಇಲ್ಲ ಅಂತ ವಾದಿಸುತ್ತಿದ್ದಾರೆ. ಈ ಮಧ್ಯೆ ಪ್ರಕರಣವನ್ನು ಪ್ರಧಾನಿ (Prime Minister) ಹಾಗೂ ರಾಷ್ಟ್ರಪತಿ ಅಂಗಳಕ್ಕೆ ಕೊಂಡೊಯ್ಯಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಧರಿಸಿದ್ದಾರೆ.
ಸಿಟಿ ರವಿ ವಿರುದ್ಧ ಕಾನೂನು ಹೋರಾಟ ಮುಂದುವರೆಸುತ್ತೇನೆ. ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಕೇಳ್ತೀನಿ, ಅವಕಾಶ ಸಿಕ್ಕರೆ ಮೋದಿಯವರನ್ನು ಭೇಟಿಯಾಗಿ, ನನಗಾದ ಅನ್ಯಾಯಕ್ಕೆ ನ್ಯಾಯ ಕೇಳ್ತೀನಿ ಅಂತ ಹೇಳಿದ್ದಾರೆ. ಅಲ್ಲದೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪತ್ರ ಬರೆಯುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ನನಗೆ ಅನ್ಯಾಯವಾಗಿದೆ. ಎಲ್ಲದಕ್ಕೂ ಹೆಚ್ಚಾಗಿ ನಾನು ಮಹಿಳೆ, ಸಿಟಿ ರವಿ ಮಾತಿನಿಂದ ಚನ್ನಮ್ಮನ ನಾಡಿನ ಮಹಿಳೆ ಆತ್ಮಗೌರವಕ್ಕೆ ಧಕ್ಕೆಯಾಗಿದೆ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ರಾಜಕಾರಣದಲ್ಲಿ ಮಹಿಳೆಯರನ್ನು ಹಿಂದಕ್ಕೆ ತರಿಸೋಕೆ, ಆತ್ಮಸ್ಥೈರ್ಯ ಕುಗ್ಗಿಸೋ ಪ್ರಯತ್ನ.. ಇದರಿಂದ ಹಿಂದೆ ಸರಿತೀವಿ, ಮನೆಯಲ್ಲಿ ಕೂರುತ್ತೀವಿ ಅನ್ನೋದು ಭ್ರಮೆ ಅದನ್ನು ಬಿಡಿ ಅಂತ ಸಚಿವೆ ಹೇಳಿದ್ದಾರೆ.
ಸಿಟಿ ರವಿ ಮಾತಿನಿಂದ ನಾನು ಶಾಕ್ ಆಗಿ ಗರ ಬಡಿದಂತೆ ಕೂತಿದ್ದೆ. ನನಗೆ ಸುಧಾರಿಸಿಕೊಳ್ಳುವುದಕ್ಕೆ 2 ದಿನ ಬೇಕಾಯ್ತು ಅಂತ ಅವರು ವಿವರಿಸಿದ್ರು. ನಾನು ಯಾವುದೇ ಕಾರಣಕ್ಕೂ ಸುಮ್ಮನೆ ಕೂರೋ ಪ್ರಶ್ನೆ ಇಲ್ಲ, ಕಾನೂನು ಹೋರಾಟ ಮುಂದುವರೆಸುತ್ತೇನೆ ಅಂತ ಸಿಟಿ ರವಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ.