ಮೋದಿ ಸರಕಾರದಿಂದ ದೇಶದ ಸಮಗ್ರ ಅಭಿವೃದ್ಧಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

ದಿಗಂತ ವರದಿ ಕಾಸರಗೋಡು:

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ದೇಶದ ಸಮಗ್ರ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಅಭೂತಪೂರ್ವ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೃಷಿ, ಕೈಗಾರಿಕೆ, ಶಿಕ್ಷಣ, ಉದ್ಯೋಗ, ಮಹಿಳಾ, ಯುವ, ಬಡವರು, ಸೈನಿಕರು ಮೊದಲಾದ ಎಲ್ಲಾ ವಲಯಗಳಿಗೂ ಕೇಂದ್ರ ಸರಕಾರವು ಹೆಚ್ಚಿನ ಒತ್ತು ನೀಡಿದೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ಬುಧವಾರ ಜರಗಿದ ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಪಜ್ವ ಅವರ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎನ್ ಡಿಎ ನೇತೃತ್ವದ ಕೇಂದ್ರ ಸರಕಾರವು ರಾಷ್ಟ್ರದ ಭದ್ರತೆಗೆ ವಿಶೇಷ ಆದ್ಯತೆ ನೀಡಿದೆ. ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದ ಉಗ್ರಗಾಮಿ ಕೃತ್ಯಗಳನ್ನು ನಿಗ್ರಹಿಸಲಾಗಿದೆ. ಭಾರತದ ವಿರೋಧಿಗಳಿಗೆ ಸಮರ್ಥ ಪ್ರತ್ಯುತ್ತರ ನೀಡಲಾಗುತ್ತಿದೆ. ಈ ಮೂಲಕ ದೇಶದ ಭದ್ರತೆ, ಸಮಗ್ರತೆ ಹಾಗೂ ಅಖಂಡತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬುದು ಇಡೀ ಜಗತ್ತಿಗೇ ಅರಿವಾಗಿದೆ. ಇದು ಮೋದಿ ಸರಕಾರದ ಬದ್ಧತೆ ಎಂದು ಕೇಂದ್ರ ರಕ್ಷಣಾ ಸಚಿವರು ನುಡಿದರು.

ಕಾಸರಗೋಡಿನಲ್ಲಿ ಎನ್ ಡಿಎ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿಯೋರ್ವ ಕಾರ್ಯಕರ್ತರು ಸೇವೆ ಸಲ್ಲಿಸಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಈ ಮೂಲಕ ಪಣ ತೊಡಬೇಕು. ಈ ಬಾರಿ ಕೇರಳದಿಂದ ಎನ್ ಡಿಎ ಸಂಸದರು ಪಾರ್ಲಿಮೆಂಟ್ ನಲ್ಲಿ ಖಂಡಿತ ಇರಲಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಮನೆ ಮನೆ ಸಂಪರ್ಕ ಅಭಿಯಾನವನ್ನು ಸುವ್ಯವಸ್ಥಿತವಾಗಿ ಪೂರ್ತಿಗೊಳಿಸಬೇಕು. ಬಿಜೆಪಿ ಜನರ ವಿಶ್ವಾಸ ಗಳಿಸಿದ ಪಕ್ಷವಾಗಿದ್ದು , 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಪಜ್ವ, ಬಿಜೆಪಿ ಕೇರಳ ರಾಜ್ಯ ಸಹ ಪ್ರಭಾರಿ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಕೇರಳ ರಾಜ್ಯ ಕಾರ್ಯದರ್ಶಿ ಕೆ.ರಂಜಿತ್, ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಎನ್ ಡಿಎ ಚುನಾವಣಾ ಸಮಿತಿ ಅಧ್ಯಕ್ಷ, ವಕೀಲ ಎಂ.ನಾರಾಯಣ ಭಟ್, ಬಿಡಿಜೆಎಸ್ ಜಿಲ್ಲಾಧ್ಯಕ್ಷ ಗಣೇಶ್ ಪಾರೆಕಟ್ಟೆ ಸೇರಿದಂತೆ ಬಿಜೆಪಿ ಹಾಗೂ ಎನ್ ಡಿಎ ಮಿತ್ರಪಕ್ಷಗಳ ಅನೇಕ ಮಂದಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಮಧ್ಯೆ ಕೇಂದ್ರ ರಕ್ಷಣಾ ಖಾತೆ ಸಚಿವರಿಗೆ ಝೆಡ್ ಪ್ಲಸ್ ಭದ್ರತೆ ಒದಗಿಸಲಾಗಿತ್ತು. ಅಲ್ಲದೆ ಕಾಸರಗೋಡು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಅಸಂಖ್ಯಾತ ಮಂದಿ ಪ್ರಮುಖರು, ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!