ಹೊಂದಾಣಿಕೆ ರಾಜಕಾರಣ ನನ್ನ ಜಾಯಮಾನದಲ್ಲೇ ಇಲ್ಲ: ಸಚಿವ ಬಿ.ಶ್ರೀರಾಮುಲು

ಹೊಸದಿಗಂತ ವರದಿ, ಬಳ್ಳಾರಿ:

ಹೊಂದಾಣಿಕೆ ರಾಜಕಾರಣ ನನ್ನ ಜಾಯಮಾನದಲ್ಲೇ ಇಲ್ಲ, ಕೆಲವರು ಇದನ್ನು ತಪ್ಪಾಗಿ ಅರ್ಥೈಸಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಪಕ್ಷದ ತತ್ವ ಹಾಗೂ ಸಿದ್ದಾಂತಗಳ ಆಧಾರದ ಮೇಲೆ ಚುನಾವಣೆ  ಎದುರಿಸುತ್ತೇನೆ, ಹೊಂದಾಣಿಕೆ ಎನ್ನುವ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಿರುಕುಳಕ್ಕೆ‌ ಬೇಸತ್ತ ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರು ಬಿಜೆಪಿಗೆ‌ ಬರಲಿ ಎಂದು ಇತ್ತೀಚೆಗೆ ಹೇಳಿಕೆ‌ ನೀಡಿದ್ದೆ, ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸ್ಪಷ್ಟೀಕರಣ ನೀಡಿದ್ದೇನೆ, ಇದನ್ನೇ ಕೆಲವರು ತಪ್ಪಾಗಿ ಅರ್ಥೈಸಿ ಜನರಲ್ಲಿ ಗೊಂದಲ ಮೂಡಿಸಲು ಮುಂದಾಗಿದ್ದಾರೆ, ಅವರ ಆಟ ಏನೂ ನಡೆಯೋಲ್ಲ ಎಂದರು. ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರು, ಹಿಂದುಳಿದ  ಸಮಾಜದ ನಾಯಕರಾಗಿದ್ದು,  ಅವರು ಬಿಜೆಪಿ ಗೆ ಬಂದರೇ  ಇನ್ನಷ್ಟು ಶಕ್ತಿ ಬರಲಿದೆ ಎಂದು ಹೇಳಿರುವೆ, ಕೈಪಾಳೆಯದಿಂದ ಅನೇಕ ಜನ ಹಿಂದುಳಿದ ವರ್ಗಗಳ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರೂ ಬಿಜೆಪಿ ಬರಲಿ ಎಂದು ಹೇಳಿಕೆ ನೀಡಿರುವೆ, ಸಿದ್ದರಾಮಯ್ಯ ಅವರಿಗೆ ಕೈ ಪಾಳೆಯದಲ್ಲಿ ಇರುಸು ಮುರುಸು ಉಂಟಾಗುತ್ತಿದೆ. ಅವರಿಗೆ ಡಿಕೇಶಿ ಅವರ ನಾನಾ ಕಿರುಕುಳವೇ ಹೆಚ್ಚಾಗಿದೆ. ಅವರಿಬ್ಬರಲ್ಲೇ ಸಾಕಷ್ಟು ಜಿದ್ದಾಜಿದ್ದಿ ನಡೆಯುತ್ತಿದೆ, ಎಲ್ಲವನ್ನೂ ಗಮನಿಸಿ ಪಕ್ಷಕ್ಕೆ ಬರಲಿ ಎಂದು ಸ್ವಾಗತಿಸಿದ್ದೆ, ಈ ಹೇಳಿಕೆಗೆ ಸಂಬಂಧಿಸಿ ರಾಜ್ಯಾಧ್ಯಕ್ಷ ಕಟೀಲ್‌ಜೀ ಅವರೊಂದಿಗೆ ಮಾತನಾಡಿ ಸ್ಪಷ್ಟೀಕರಣ ‌ನೀಡಿರುವೆ ಎಂದರು. ಬಿಜೆಪಿ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮೀತಿ ಸದಸ್ಯರಾಗಿ ಆಯ್ಕೆಯಾಗಿರುವ ಮಾಜಿ ಸಿ.ಎಂ.ಬು.ಎಸ್.ಯಡಿಯೂರಪ್ಪ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವೆ. ಅವರು ಪಕ್ಷಕ್ಕೆ ನೀಡಿದ ಕೊಡುಗೆ, ಸೇವೆ, ಅವರ ಪ್ರಾಮಾಣಿಕತೆ, ಪಕ್ಷಕ್ಕಾಗಿ ಅವರು ದುಡಿದ ಸೇವೆಯನ್ನು ಗುರಿತಿಸಿ ಕೇಂದ್ರದ ವರೀಷ್ಠರು ಬಿ.ಎಸ್.ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನ ನೀಡಿ ಗೌರವಿಸಿದ್ದಾರೆ, ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಎಲ್ಲರೂ ಒಗ್ಗಟ್ಟಾಗಿದ್ದು, ಬರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಮತ್ತೋಮ್ಮೆ ಅಧಿಕಾರಕ್ಕೆ ಬರಲಿದ್ದೇವೆ, ಇದರಲ್ಲಿ ಅನುಮಾನವೇ ಇಲ್ಲ, ಮತ್ತೆ ರಾಜ್ಯದಲ್ಲಿ ಕಮಲ ಅರಳಲಿದೆ ಎಂದರು. ಈ ಸಂದರ್ಭದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬೂಡಾ ಅದ್ಯಕ್ಷ ಕಾರ್ಕಲತೋಟ ಪಾಲನ್ನ, ಮಲ್ಲನಗೌಡ, ಮೋತ್ಕರ್ ಶ್ರೀನಿವಾಸ್, ಕೆ.ರಾಮಲಿಂಗಪ್ಪ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!