Friday, February 3, 2023

Latest Posts

ಮರು ವ್ಯಾಖ್ಯಾನಿಸಿದ ಮಾನದಂಡದಡಿ ಕೊಡವರನ್ನು ಎಸ್ಟಿ ಪಟ್ಟಿಗೆ ಸೇರಿಸಲು ಒತ್ತಾಯ

ಹೊಸದಿಗಂತ ವರದಿ ಮಡಿಕೇರಿ:

ಕೇಂದ್ರ ಸರ್ಕಾರದ ಅಧೀನದ ಕೇಂದ್ರ ಬುಡಕಟ್ಟು ಸಚಿವಾಲಯವು 2017ರಲ್ಲಿ ರೂಪಿಸಿದ ‘ಹೊಸ ಮರು ವ್ಯಾಖ್ಯಾನಿಸಿದ ಮಾನದಂಡ’ದಡಿಯಲ್ಲಿ ಕೊಡವ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಮೂಲಕ ಸಂವಿಧಾನದ ಭದ್ರತೆಯನ್ನು ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಸಂಬಂಧ ಕೇಂದ್ರ ಬುಡಕಟ್ಟು ಮಂತ್ರಾಲಯ, ರಾಷ್ಟ್ರೀಯ ಬುಡಕಟ್ಟು ಆಯೋಗ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಬುಡಕಟ್ಟು ಕಲ್ಯಾಣ ಮಂತ್ರಾಲಯದ ಕಾರ್ಯದರ್ಶಿ, ನಿರ್ದೇಶಕರು ಹಾಗೂ ಬುಡಕಟ್ಟು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಕೊಡಗಿನ ಮೂಲ ಬುಡಕಟ್ಟು ಜನಾಂಗವಾಗಿರುವ ಕೊಡವರನ್ನು ಎಸ್ಟಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದು ತ್ವರಿತವಾಗಿ ಆಗದಿದ್ದರೆ ಕೊಡವ ಬುಡಕಟ್ಟು ಜನಾಂಗದ ಭವಿಷ್ಯವು ಕತ್ತಲೆಯಲ್ಲಿ ಮುಳುಗುತ್ತದೆ. ಕೊಡವರ ಜಾನಪದ ಗುರುತು ಮತ್ತು ಭೌಗೋಳಿಕ-ರಾಜಕೀಯ ಅಸ್ತಿತ್ವಕ್ಕೆ ಹಾನಿಯಾಗಲಿದೆ. ಭಾರತ ದೇಶವು ಬಹು ಜನಾಂಗೀಯ ಹೂದೋಟದಂತಿದ್ದು, ಇತರ ಜನಾಂಗೀಯ ಗುಂಪುಗಳಿಗೆ ನೀಡಲಾಗುವ ಅದೇ ಸಾಂವಿಧಾನಿಕ ಪೋಷಣೆಯನ್ನು ಕೊಡವ ಬುಡಕಟ್ಟು ಜನಾಂಗಕ್ಕೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಪಹಾರಿ ಸಮುದಾಯ, ಪೆರಂಬಲೂರಿನ ನರಿಕೊರವನ್/ ನರಿಕುರವರ್, ಊಟಿಯ ಬಡಗಾಸ್, ಅಸ್ಸಾಂನ ಕೋಚ್ ರಾಜ್ಬೊಂಗ್ಶಿ, ಮಟಕ್, ಮೋರಾನ್, ಟೀ ಟ್ರೈಬ್, ಚುಟಿಯಾ, ತೈ ಅಹೋಮ್ ಸೇರಿದಂತೆ 6 ಬುಡಕಟ್ಟು ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರಿಸಲು ಉತ್ಸುಕವಾಗಿದೆ ಮತ್ತು ಪ್ರಕ್ರಿಯೆ ಆರಂಭಿಸಿದೆ. ಸಾಂವಿಧಾನಿಕವಾಗಿ ಹಕ್ಕನ್ನು ಪಡೆಯಲು ಬಾಕಿ ಉಳಿದಿರುವ ಕೊಡವ ಜನಾಂಗದ ಬಗ್ಗೆಯೂ ಕೇಂದ್ರ ಸರ್ಕಾರ ಅದೇ ಕ್ರಮ ಅನುಸರಿಸಬೇಕು ಎಂದು ಹೇಳಿದ್ದಾರೆ.

1956 ರಲ್ಲಿ ಕೂರ್ಗ್ ಅನ್ನು ವಿಶಾಲ ಮೈಸೂರಿನಲ್ಲಿ ವಿಲೀನಗೊಳಿಸಿದ ನಂತರ, ಇಂದಿನ ಕರ್ನಾಟಕ ರಾಜ್ಯವು ಕೊಡವ ಜನಾಂಗದ ಎಲ್ಲಾ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಹುಸಿ ಮಾಡಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.

ಉಳಿದಿರುವುದೊಂದೇ ಮಾರ್ಗ: ಕೊಡವ ಜನಾಂಗದೊಳಗೆ ಯಾವುದೇ ಉಪಪಂಗಡವಿಲ್ಲ, ನಾವು ಕೂರ್ಗ್’ಗರ ಮಾತ್ರ ಸೀಮಿತವಾಗಿದ್ದೇವೆ, ನಮ್ಮ ಜನಸಂಖ್ಯೆ ಕೂಡಾ ಕಡಿಮೆ ಇದೆ. ಆದ್ದರಿಂದ ಸೂಕ್ಷ್ಮ ಕೊಡವ ಜನಾಂಗವನ್ನು ರಕ್ಷಿಸಲು ಮತ್ತು ಅಧಿಕಾರ ನೀಡಲು ಸಂವಿಧಾನದಲ್ಲಿ ಉಳಿದಿರುವ ಏಕೈಕ ಆಯ್ಕೆಯೆಂದರೆ ಅವರನ್ನು ಎಸ್‍ಟಿ ಪಟ್ಟಿಗೆ ಸೇರಿಸುವುದು ಎಂದು ನಾಚಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ/ಸ್ವಯಂ-ಆಡಳಿತವನ್ನು ಸಾಧಿಸಲು ಮತ್ತು ಕೊಡವರನ್ನು ಎಸ್‍ಟಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಶಾಂತಿಯುತವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದೆ.

ಸಿಎನ್‍ಸಿಯ ಮನವಿಗೆ ಪ್ರತಿಯಾಗಿ 2011 ರಲ್ಲಿ ಸರ್ಕಾರ ಕೊಡವರ ಎಥ್ನೋಗ್ರಾಫಿಕ್ ಅಧ್ಯಯನಕ್ಕೆ ಆದೇಶ ನೀಡಿತು. ಆದರೆ ಮೈಸೂರಿನಲ್ಲಿರುವ ಪೂರ್ವಾಗ್ರಹ ಮನೋಭಾವದ ಜನರು ಇಡೀ ಅಧ್ಯಯನ ಪ್ರಕ್ರಿಯೆಯನ್ನು ಅಪಾಯಕ್ಕೆ ಸಿಲುಕಿಸಿದರು. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಇಡೀ ಪ್ರಕ್ರಿಯೆಯನ್ನು ಬುಡಮೇಲು ಮಾಡಿದರು. ಇದರ ವಿರುದ್ಧ ನಾವು ಕಾನೂನು ಮೊರೆ ಹೋದಾಗ ಉಚ್ಚ ನ್ಯಾಯಾಲಯವು 21 ಜುಲೈ 2021 ರಂದು ಜನಾಂಗೀಯ ಅಧ್ಯಯನವನ್ನು ಸರಿಪಡಿಸಲು ಅಥವಾ ಅದರ ಮರು-ಅಧ್ಯಯನಕ್ಕಾಗಿ ತೀರ್ಪು ನೀಡಿತು.

ನ್ಯಾಯಾಂಗ ನಿಂದನೆಗೆ ಸಮ: ಹೈಕೋರ್ಟ್ ಆದೇಶದ ಅನುಷ್ಠಾನಕ್ಕಾಗಿ ಬುಡಕಟ್ಟು ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು 25 ಏಪ್ರಿಲ್ 2022 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ನಮ್ಮೊಂದಿಗೆ ಸಭೆಯನ್ನು ನಡೆಸಿ ಅಭಿಪ್ರಾಯವನ್ನು ಸಂಗ್ರಹಿಸಿದರು. ಮರು ಅಧ್ಯಯನಕ್ಕೆ ಶಿಫಾರಸ್ಸು ಮಾಡಿದರು ಮತ್ತು ಕಡತವನ್ನು ಬುಡಕಟ್ಟು ಕಲ್ಯಾಣ ಇಲಾಖೆಗೆ ರವಾನಿಸಿದರು.

17 ಆಗಸ್ಟ್ 2022 ರಂದು ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಸಚಿವರನ್ನು ಭೇಟಿ ಮಾಡಿದಾಗ ನಮ್ಮ ಬೇಡಿಕೆಗೆ ಒಪ್ಪಿಗೆ ನೀಡಿದರು ಮತ್ತು ಅದರ ಕ್ಲಿಯರೆನ್ಸ್‍ಗಾಗಿ ಕಡತವನ್ನು ಕರ್ನಾಟಕದ ಸಿಎಂಗೆ ರವಾನಿಸಿದರು. ಆದರೆ ನಂತರದ ದಿನಗಳಲ್ಲಿ ನಮ್ಮ ಕಡತವನ್ನು ನಿರ್ಲಕ್ಷಿಸಲಾಗಿದೆ. ಇದು ನ್ಯಾಯಾಂಗ ನಿಂದನೆಗೆ ಸಮಾನವಾಗಿದೆ ಎಂದು ನಾಚಪ್ಪ ಟೀಕಿಸಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!