ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿರುವ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಜೋರಾಗಿದೆ. ಜೈಲಿನಲ್ಲಿರುವ ಅವರಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿದೆಯೇ ಎಂಬ ಅನುಮಾನಗಳ ನಡುವೆ ವಿಶ್ವ ಕ್ರಿಕೆಟ್ ಕ್ಷೇತ್ರದ ಹಲವು ಮಾಜಿ ನಾಯಕರು ಪಾಕ್ ಸರ್ಕಾರದ ಗಮನ ಸೆಳೆಯಲು ಒಟ್ಟಾಗಿ ಮುಂದಾಗಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಅಡಿಯಾಲಾ ಜೈಲಿನಲ್ಲಿ ಇರುವ 73 ವರ್ಷದ ಇಮ್ರಾನ್ ಖಾನ್ ಅವರ ದೃಷ್ಟಿ ಸಮಸ್ಯೆ ಗಂಭೀರವಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ವೈದ್ಯಕೀಯ ವರದಿಗಳ ಪ್ರಕಾರ, 2025ರ ಅಕ್ಟೋಬರ್ ವರೆಗೆ ಅವರ ದೃಷ್ಟಿ ಸಾಮಾನ್ಯವಾಗಿದ್ದರೂ ನಂತರ ನಿಧಾನವಾಗಿ ಮಸುಕಾಗತೊಡಗಿದೆ. ಕಣ್ಣಿನೊಳಗೆ ರಕ್ತ ಹೆಪ್ಪುಗಟ್ಟಿರುವುದರಿಂದ ದೃಷ್ಟಿಗೆ ಹಾನಿಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಹಲವು ಬಾರಿ ಚಿಕಿತ್ಸೆಗಾಗಿ ಮನವಿ ಮಾಡಿದರೂ ಅಗತ್ಯವಾದ ಚಿಕಿತ್ಸೆ ಸಿಗಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:
ಈ ಹಿನ್ನೆಲೆ ಭಾರತದ ಮಾಜಿ ನಾಯಕರು ಕಪಿಲ್ ದೇವ್ ಮತ್ತು ಸುನಿಲ್ ಗವಾಸ್ಕರ್ ಸೇರಿದಂತೆ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ತಂಡಗಳ ಮಾಜಿ ನಾಯಕರು ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿರುವ ವ್ಯಕ್ತಿಗೆ ಮಾನವೀಯತೆ ಆಧಾರಿತ ಚಿಕಿತ್ಸೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಮ್ರಾನ್ ಖಾನ್ 1971ರಿಂದ 1992ರವರೆಗೂ ಪಾಕ್ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ. 1987ರಲ್ಲಿ ವಿಶ್ವಕಪ್ ಅಂತ್ಯದಲ್ಲಿ ನಿವೃತ್ತಿ ಘೋಷಿಸಿದ್ದರು.



