ಮಾ.26ರಂದು ಜೆಡಿಎಸ್ ಪಂಚರತ್ನ ಸಮಾರೋಪ ಸಮಾವೇಶ: ಎಚ್ ಡಿ ಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಾ. 26ರಂದು ಮೈಸೂರು ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನ ಬೃಹತ್ ಮೈದಾನದಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆಯ ಬೃಹತ್ ಸಮಾರೋಪ ಸಮಾವೇಶದ ಸಿದ್ಧತಾ ಕೆಲಸಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವೀಕ್ಷಿಸಿದರು.

ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಸೇರುವ ಈ ಬೃಹತ್ ಸಮಾವೇಶದಲ್ಲಿ ಆಸನ, ಊಟ, ಕುಡಿಯುವ ನೀರು, ಪಾರ್ಕಿಂಗ್ ಸೇರಿದಂತೆ ಅನೇಕ ವಿಷಯಗಳ ಕುರಿತಾಗಿ ಪರಿಶೀಲನೆ ನಡೆಸಿದ ಎಚ್ ಡಿಕೆ , ಅಂತಿಮ ಹಂತದ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿಯೇ ಇದೊಂದು ಮಹತ್ವದ ಸಮಾವೇಶ ಆಗಿದ್ದು, ಯಾವುದೇ ಸಣ್ಣ ಸಮಸ್ಯೆಯೂ ಆಗದಂತೆ ನಿರಾತಂಕವಾಗಿ ಸಮಾವೇಶ ನಡೆಯಬೇಕು. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಜೆಡಿಎಸ್ ವತಿಯಿಂದ ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ, ಅದೂ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯುತ್ತದೆ. ಸುಮಾರು 100 ಎಕರೆಯಲ್ಲಿ ಒಂದು ಐತಿಹಾಸಿಕ ಕಾರ್ಯಕ್ರಮ ಮಾಡಲು ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಲಿಕ್ಕೆ ಎಲ್ಲರೂ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.

ನಮ್ಮ ನಿರೀಕ್ಷೆಗೂ ಮೀರಿ ಈ ಪಂಚರತ್ನ ರಥಯಾತ್ರೆಗೆ ಜನರು ಬೆಂಬಲ ನೀಡಿದ್ದಾರೆ. ನಾನು ಹೋದ ಎಲ್ಲ ಕಡೆ ಆಶೀರ್ವಾದ ಮಾಡಿದ್ದಾರೆ. ಅಂತಿಮವಾಗಿ 10 ಲಕ್ಷ ಜನರ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಕಾರ್ಯಕ್ರಮ 2023ರ ನಮ್ಮ ಪಕ್ಷದ ಚುನಾವಣೆ ಪ್ರಚಾರಕ್ಕೂ ನಾಂದಿ ಆಗಲಿದೆ ಎಂದರು ಅವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!