ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಪ್ರಮಾಣಿತ ಪರೀಕ್ಷೆ(ಎನ್ಎಸ್ಇ) ಯಲ್ಲಿ ಕನ್ನಡ ಮಾಧ್ಯಮವನ್ನು ಅಳವಡಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ರಾಷ್ಟ್ರೀಯ ಪ್ರಮಾಣಿಕತ ಪರೀಕ್ಷೆಯೂ ಒಂದು. ಮಾನವ ಸಂಪನ್ಮೂಲ ಸಚಿವಾಲಯ, ಡಿಎಸ್ಟಿ, ಇಸ್ರೋ ಮತ್ತು ಇತರರ ಪ್ರತಿನಿಧಿಗಳೊಂದಿಗೆ ಪರಮಾಣು ಶಕ್ತಿ ಇಲಾಖೆಯಿಂದ ರಚಿಸಲ್ಪಟ್ಟ ರಾಷ್ಟ್ರೀಯ ಸ್ಟೀರಿಂಗ್ ಸಮಿತಿಯ ಮೇಲ್ವಿಚಾರಣೆಯಲ್ಲಿ ಭಾರತೀಯ ಭೌತಶಾಸ್ತ್ರ ಶಿಕ್ಷಕರ ಸಂಘವು ಈ ಪರೀಕ್ಷೆಯನ್ನು ನಡೆಸುತ್ತಿದೆ. ಆದರೆ ಪ್ರತಿಭಾನ್ವಿತರನ್ನು ಆಯ್ಕೆ ಮಾಡುವ ಈ ಪರೀಕ್ಷೆಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಖಗೋಳಶಾಸ್ತ್ರದ ಭಾಷೆಗಳ ಆಯ್ಕೆಗಳಿಗೆ ಕನ್ನಡವನ್ನು ಸೇರಿಸದೇ ಇರುವುದು ನಿರಾಶಾದಾಯಕ.
ಸಂವಿಧಾನದ ಎಂಟನೇ ಷೆಡ್ಯೂಲ್ನಲ್ಲಿ ಪಟ್ಟಿ ಮಾಡಲಾದ ಆರು ಶಾಸ್ತ್ರೀಯ ಭಾಷೆಗಳಲ್ಲಿ ಕನ್ನಡವೂ ಒಂದು. ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪರೀಕ್ಷೆ ತೆಗೆದುಕೊಳ್ಳಲು ಪರೀಕ್ಷೆಯ ಮಾಧ್ಯಮದಲ್ಲಿ ಕನ್ನಡವನ್ನು ಸೇರಿಸುವ ತುರ್ತು ಅಗತ್ಯವಿದೆ. ಈ ಬಗ್ಗೆ ತಾವು ಪರಿಶೀಲಿಸಲು ನಿಮ್ಮನ್ನು ವಿನಂತಿಸುತ್ತೇನೆ. ಕನ್ನಡ ಮಾಧ್ಯಮ ಸೇರ್ಪಡೆಯಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಅವರ ವೈಜ್ಞಾನಿಕ ಅನ್ವೇಷಣೆಗಳ ವೃದ್ಧಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಆದ್ದರಿಂದ ಮುಂಬರುವ ಪರೀಕ್ಷೆಗಳಲ್ಲಿ ಈ ಬದಲಾವಣೆಯನ್ನು ತರಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.