ಭಾರತದಲ್ಲಿ ಬುಲೆಟ್‌ ಟ್ರೈನ್ ಸಂಚಾರ ಯಾವಾಗ? ರೈಲ್ವೆ ಸಚಿವ ಅಶ್ವಿನ್ ವೈಷ್ಣವ್‌ ಕೊಟ್ಟರು ಮಹತ್ವದ ಅಪ್ಡೇಟ್…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಗುಜರಾತ್‌ನ ಸೂರತ್ ಮತ್ತು ಬಿಲಿಮೋರಾ ನಡುವೆ 2026 ರಲ್ಲಿ ದೇಶದ ಮೊದಲ ಬುಲೆಟ್ ರೈಲು ಸಂಚಾರ ನಡೆಸಲಿದೆ ಎಂದು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯ ಪ್ರಗತಿ ಪರಿಶೀಲನೆಗೆ ಸೂರತ್‌ಗೆ ಆಗಮಿಸಿದ್ದ ವೈಷ್ಣವ್ ಮಹತ್ವದ ವಿಚಾರ ಹಂಚಿಕೊಂಡಿದ್ದಾರೆ.
“ನಾವು 2026 ರಲ್ಲಿ ಸೂರತ್ ಮತ್ತು ಬಿಲಿಮೊರಾ ನಡುವೆ ಮೊದಲ ಬುಲೆಟ್ ರೈಲು ಓಡಿಸುವ ಗುರಿಯನ್ನು ಇರಿಸಿಕೊಂಡಿದ್ದೇವೆ. ಕಾಮಗಾರಿಯ  ಪ್ರಗತಿಯು ತುಂಬಾ ಉತ್ತಮವಾಗಿದೆ ಮತ್ತು ನಿಗದಿತ ವೇಳೆಯಲ್ಲಿ ರೈಲು ಸಂಚಾರ ಆರಂಭಿಸುವ ವಿಶ್ವಾಸವಿದೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಬಿಲಿಮೋರಾ ದಕ್ಷಿಣ ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಈ ಯೋಜನೆಯನ್ವಯ ಅಹಮದಾಬಾದ್ ಮತ್ತು ಮುಂಬೈ ನಡುವೆ ಸಂಚರಿಸುವ ಹೈ ಸ್ಪೀಡ್ ಬುಲೆಟ್ ಟ್ರೈನ್ 320 kmph ವೇಗದಲ್ಲಿ 508 ಕಿಮೀ ಕ್ರಮಿಸಲಿದೆ. ಈ ರೈಲು 12 ನಿಲ್ದಾಣಗಳನ್ನು ಹಾದುಹೋಗಲಿದೆ. ಬುಲೆಟ್‌ ಟ್ರೈನ್‌ ಸೇವೆ ಆರಂಭಗೊಂಡಾಗ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಆರು ಗಂಟೆಗಳಿಂದ ಸುಮಾರು ಮೂರು ಗಂಟೆಗಳಿಗೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ.1.1 ಲಕ್ಷ ಕೋಟಿ ಎಂದು ಅಂದಾಜಿಸಲಾಗಿರುವ ಯೋಜನಾ ವೆಚ್ಚದ ಶೇ 81ರಷ್ಟು ಹಣವನ್ನು ಜಪಾನ್‌ ಇಂಟರ್‌ನ್ಯಾಷನಲ್‌ ಕೋಆಪರೇಷನ್‌ ಏಜೆನ್ಸಿ (JICA) ನೀಡುತ್ತಿದೆ.
ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ, ಹೊಸ ವಂದೇ ಭಾರತ್ ರೈಲುಗಳು, ಕವಚ (ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆ), ಬುಲೆಟ್ ರೈಲುಗಳಂತಹ ಅಲ್ಟ್ರಾ ಆಧುನಿಕ ಮತ್ತು ಅತ್ಯುತ್ತಮ ಸೇವೆಗಳು ಪ್ರಾರಂಭವಾಗುತ್ತಿರುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿತ್ವವಿದೆ. ನಾವು 130 ಕೋಟಿ ಭಾರತೀಯರ ಆಶಯಗಳನ್ನು ಈಡೇರಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!