ಸಿರಿಯಾದಲ್ಲಿ ಸಂಘರ್ಷ: 1 ಸಾವಿರಕ್ಕೂ ಅಧಿಕ ಮಂದಿ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಸಿರಿಯಾದಲ್ಲಿ ಬಷರ್ ಅಲ್-ಅಸ್ಸಾದ್ ಅವರ ಆಡಳಿತ ಕೊನೆಗೊಂಡ ನಂತರ, ಅಲಾವೈಟ್ ಸಮುದಾಯದ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಸಿರಿಯನ್​ ಭದ್ರತಾ ಪಡೆಗಳು ಮತ್ತು ಪದಚ್ಯುತ ಅಧ್ಯಕ್ಷ ಬಶರ್​ ಅಸದ್​​ ಬೆಂಬಲಿಗರ ನಡುವೆ ಎರಡು ದಿನಗಳಿಂದ ನಡೆಯುತ್ತಿರುವ ಘರ್ಷಣೆಯಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.

ಲಟಾಕಿಯಾ, ಟಾರ್ಟಸ್ ಮತ್ತು ಹಮಾ ಪ್ರಾಂತ್ಯಗಳಲ್ಲಿ ಹೆಚ್ಚಿನ ಸಂಘರ್ಷ ನಡೆದಿದೆ. ಸಾವಿನ ಸಂಖ್ಯೆ 1 ಸಾವಿರ ದಾಟಿದೆ. ಹಲವರು ಗಾಯಗೊಂಡಿದ್ದಾರೆ ಎಂದು ಬ್ರಿಟನ್​ ಮೂಲದ ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ (SOHR)ದ ವರದಿ ಹೇಳಿದೆ.

ಅಸದ್ ಆಡಳಿತ ಹೋದ ನಂತರ ಕನಿಷ್ಠ 745 ನಾಗರಿಕರನ್ನು ಹತ್ಯೆ ಮಾಡಲಾಗಿದೆ. ಹೆಚ್ಚಿನ ಹತ್ಯೆಗಳು ಗುಂಡಿಕ್ಕಿ ಕೊಲ್ಲುವ ಮೂಲಕ ನಡೆದಿವೆ. ಕನಿಷ್ಠ 125 ಸರ್ಕಾರಿ ಭದ್ರತಾ ಸಿಬ್ಬಂದಿ ಮತ್ತು 148 ಅಸ್ಸಾದ್ ಬೆಂಬಲಿತ ಗುಂಪುಗಳ ಹೋರಾಟಗಾರರು ಸಹ ಕೊಲ್ಲಲ್ಪಟ್ಟಿದ್ದಾರೆ.

ಅಸ್ಸಾದ್​​ ಬೆಂಬಲಿತ ಉಗ್ರರು ನಡೆಸುತ್ತಿರುವ ಗಲಭೆಗೆ ಭದ್ರತಾ ಪಡೆಗಳು ಭಾರೀ ಪ್ರಮಾಣದಲ್ಲಿ ಪ್ರತ್ಯುತ್ತರ ನೀಡುತ್ತಿವೆ. ತಾರ್ಟೌಸ್ ಮತ್ತು ಲಟಾಕಿಯಾ ಪ್ರಾಂತ್ಯಗಳ ಹೆಚ್ಚಿನ ಪ್ರದೇಶಗಳನ್ನು ನಿಯಂತ್ರಣಕ್ಕೆ ಪಡೆಯಲಾಗಿದೆ. ಅಸ್ಸಾದ್ ಬೆಂಬಲಿಗರು ಭದ್ರತಾ ಚೆಕ್‌ಪೋಸ್ಟ್‌ಗಳು, ಬೆಂಗಾವಲುಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಲಟಾಕಿಯಾ ಮತ್ತು ಇತರ ಕರಾವಳಿ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಇವುಗಳು ಅಲ್ ಅಸ್ಸಾದ್‌ಗೆ ಬೆಂಬಲ ನೀಡುವ ಅಲಾವೈಟ್ ಸಮುದಾಯ ನೆಲೆಸಿರುವ ಪ್ರದೇಶವಾಗಿದೆ. ಇಲ್ಲಿನ ಜನರು ದೀರ್ಘಕಾಲದಿಂದಲೂ ಅಸ್ಸಾದ್​​ನನ್ನು ಬೆಂಬಲಿಸುತ್ತಿದ್ದಾರೆ. ಸಂಘರ್ಷದ ಮಧ್ಯೆ, ನೂರಾರು ಜನರು ಲಟಾಕಿಯಾ ಗ್ರಾಮಾಂತರದಲ್ಲಿರುವ ರಷ್ಯಾದ ನೆಲೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here