ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ನಲ್ಲಿ ಕಿವೀಸ್ ತಂಡವು ಮೊದಲು ಬ್ಯಾಟ್ ಮಾಡಿ ಭಾರತಕ್ಕೆ 252 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಡೇರಲ್ ಮಿಚೆಲ್ ಹಾಗೂ ಮಿಚೆಲ್ ಬ್ರೇಸ್‌ವೆಲ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ತೋರಿದರು.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ಈ ಜೋಡಿ 7.5 ಓವರ್‌ಗಳಲ್ಲಿ 57 ರನ್‌ಗಳ ಜತೆಯಾಟವಾಡಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ವರುಣ್ ಚಕ್ರವರ್ತಿ ಯಶಸ್ವಿಯಾದರು. ವಿಲ್ ಯಂಗ್ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ರಚಿನ್ ರವೀಂದ್ರ 37 ರನ್ ಗಳಿಸಿ ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರೆ, ಮಾಜಿ ನಾಯಕ ಕೇನ್ ವಿಲಿಯಮ್ಸನ್ 11 ರನ್ ಗಳಿಸಿ ಕುಲ್ದೀಪ್‌ಗೆ ಎರಡನೇ ಬಲಿಯಾದರು. 75 ರನ್ ಗಳಿಸುವಷ್ಟರಲ್ಲಿ ಕಿವೀಸ್ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇನ್ನು ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲೇಥಮ್ ಬ್ಯಾಟಿಂಗ್ ಕೇವಲ 11 ರನ್‌ಗಳಿಗೆ ಸೀಮಿತವಾಯಿತು. ಇನ್ನು 5ನೇ ವಿಕೆಟ್‌ಗೆ ಡೇರಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಗ್ಲೆನ್ ಫಿಲಿಫ್ಸ್ 34 ರನ್ ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಡೇರಲ್ ಮಿಚೆಲ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. 101 ಎಸೆತಗಳನ್ನು ಎದುರಿಸಿದ ಡೇರಲ್ ಮಿಚೆಲ್ 3 ಬೌಂಡರಿ ಸಹಿತ 63 ರನ್ ಸಿಡಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.ಕೊನೆಯಲ್ಲಿ ಬ್ರೇಸ್‌ವೆಲ್ ಕೇವಲ 40 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 53 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.