ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್: ಪಕ್ಷದ ರಾಷ್ಟ್ರೀಯ ಅಧ್ಯಕ್ಷನ ಚುನಾವಣೆಗೆ ಮತ ಹಾಕುವವರ ಪಟ್ಟಿ ಬಹಿರಂಗಕ್ಕೆ ಪರ-ವಿರೋಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಿರಿಯ, ಮುತ್ಸದ್ಧಿ ನಾಯಕರುಗಳ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್‌ ಅಧ್ಯಕರ ಚುನಾವಣೆಯ ಕುರಿತಾಗಿ ಎದ್ದಿರುವ ಭಿನ್ನಮತವು ಪಕ್ಷದಲ್ಲಿ ಆಂತರಿಕ ಸಂಘರ್ಷ ಹೊಗೆಯಾಡುತ್ತಿರುವ ಸೂಚನೆ ನೀಡುತ್ತಿದೆ. ಕಾಂಗ್ರೆಸ್‌ ಪಕ್ಷದ ನೂತನ ಅಧ್ಯಕ್ಷರ ಚುನಾವಣೆಯ ಮತದಾರರ ಪಟ್ಟಿಯನ್ನು ಬಹಿರಂಗಗೊಳಿಸುವ ಕುರಿತು ಕಾಂಗ್ರೆಸ್ಸಿಗರ ನಡುವೆಯೇ ತಿಕ್ಕಾಟಗಳು ನಡೆಯುತ್ತಿವೆ.

ಮತದಾರರ ಪಟ್ಟಿಯನ್ನು ಬಹಿರಂಗ ಗೊಳಿಸುವಂತೆ ಕಾಂಗ್ರೆಸ್‌ ನ ಮೂವರು ಸಂಸದರು ಸಾರ್ವಜನಿಕವಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಪದ್ಧತಿಯು ಅಸ್ತಿತ್ವದಲ್ಲಿಲ್ಲ ಎನ್ನುವ ಮೂಲಕ ಪಕ್ಷವು ಈ ಬೇಡಿಕೆಯನ್ನು ತಿರಸ್ಕರಿಸಿದೆ. ಕಾಂಗ್ರೆಸ್‌ ನ ಜಿ23 ನಾಯಕರಲ್ಲಿ ಒಬ್ಬರಾಗಿರುವ ಆನಂದ್‌ ಶರ್ಮಾ ಭಾನುವಾರದ ಕಾಂಗ್ರೆಸ್‌ ವರ್ಕಿಂಗ್‌ ಕಮಿಟಿಯ ಸಭೆಯಲ್ಲಿ ಮತದಾರರ ಪಟ್ಟಿ ಬಹಿರಂಗ ಗೊಳಿಸಲು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಅಲ್ಲದೇ ಇನ್ನೊಬ್ಬ ಭಿನ್ನ ಮತೀಯರಾದ ಮನೀಷ್‌ ತಿವಾರಿ ಸಹ ಮುಕ್ತ ಮತ್ತು ನ್ಯಾಯಯುತ ಮತದಾನದ ಹಿತಾಸಕ್ತಿಯ ದೃಷ್ಟಿಯಿಂದ ಮತದಾರರ ಪಟ್ಟಿಯನ್ನು ಹೊರಹಾಕಬೇಕು ಎಂದಿದ್ದಾರೆ. ಇನ್ನು ಆಶ್ಚರ್ಯವೆಂಬಂತೆ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಹಾಗೂ ಶಶಿ ತರೂರ್‌ ಕೂಡ ಇದಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ಬಹಿರಂಗ ಪಡಿಸುವ ಅಗತ್ಯವಿಲ್ಲ:

ಆದರೆ ಈ ಕುರಿತು ಎಐಸಿಸಿಯ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಮಾತನಾಡಿದ್ದು “ಪ್ರದೇಶ ಕಾಂಗ್ರೆಸ್‌ ಕಮಿಟಿಯ ಪ್ರತಿನಿಧಿಗಳ ಪಟ್ಟಿಯು ರಾಜ್ಯ ಪ್ರಧಾನ ಕಚೇರಿಯಲ್ಲಿ ವೀಕ್ಷಿಸಬಹುದು, ಇದರ ಕ್ರೋಢಿಕೃತ ಪಟ್ಟಿಯನ್ನು ಚುನಾವಣಾ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ” ಎಂದಿದ್ದಾರೆ. ಎಐಸಿಸಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು “ಇದು ಆಂತರಿಕ ಚುನಾವಣೆಯ ಕಾರ್ಯವಿಧಾನವಾಗಿದ್ದು ಇದನ್ನು ಎಲ್ಲರೂ ನೋಡುವಂತೆ ಪ್ರಕಟಿಸುವ ಅಗತ್ಯವಿಲ್ಲ. ಇದು ಹಿಂದಿನಿಂದಲೂ ಬಂದ ಪದ್ಧತಿ. ನಾವು ಅದನ್ನೇ ಮುಂದುವರೆಸುತ್ತೇವೆ” ಎನ್ನುವ ಮೂಲಕ ಮತದಾರರ ಪಟ್ಟಿ ನಹರಂಗ ಗೊಳಿಸುವ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.

ಮತದಾರರ ಪಟ್ಟಿಯಿಲ್ಲದೆ ಮುಕ್ತ ಚುನಾವಣೆ ಹೇಗೆ ಸಾಧ್ಯ ?

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮನೀಷ್‌ ತಿವಾರಿ ತಮ್ಮ ಟ್ವೀಟೊಂದರಲ್ಲಿ “ಸಾರ್ವಜನಿಕವಾಗಿ ಲಭ್ಯವಿರುವ ಮತದಾರರ ಪಟ್ಟಿಯಿಲ್ಲದೆ ನ್ಯಾಯಯುತ ಮತ್ತು ಮುಕ್ತ ಚುನಾವಣೆ ಹೇಗೆ ನಡೆಯುತ್ತದೆ? ನ್ಯಾಯಯುತ ಮತ್ತು ಮುಕ್ತ ಪ್ರಕ್ರಿಯೆಯ ಮೂಲತತ್ವವೆಂದರೆ ಮತದಾರರ ಹೆಸರುಗಳು ಮತ್ತು ವಿಳಾಸಗಳು ಮುಕ್ತವಾಗಿರಬೇಕು. ಮತದಾರರು ಯಾರೆಂದು ಕಂಡು ಹಿಡಿಯಲು ಯಾರಾದರೂ ದೇಶದ ಪ್ರತಿಯೊಂದು ಪಿಸಿಸಿ ಕಚೇರಿಗೆ ಏಕೆ ಹೋಗಬೇಕು?” ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ತಿವಾರಿವರು ಇನ್ನೊಂದು ಪ್ರಶ್ನೆಯನ್ನು ಮುಂದಿಟ್ಟಿದ್ದು “ದೇಶದ 28 ಪ್ರದೇಶ ಕಾಂಗ್ರೆಸ್‌ ಕಮಿಟಿಗಳು ಮತ್ತು ಎಂಟು ಪ್ರಾದೇಶಿಕ ಕಾಂಗ್ರೆಸ್ ಸಮಿತಿಗಳ ಬದಲಾಗಿ ಕಾಂಗ್ರೆಸ್‌ ವರ್ಕಿಂಗ್‌ ಕಮಿಟಿಯು ಅಧ್ಯಕ್ಷರ ಚುನಾವಣೆಗೆ ವೇಳಾಪಟ್ಟಿಯನ್ನು ಏಕೆ ಘೊಷಿಸಿತು” ಎಂದು ಪ್ರಶ್ನಿಸಿದ್ದಾರೆ.

ಬಹಿರಂಗಗೊಳಿಸುವುದರಲ್ಲೇನೂ ತಪ್ಪಿಲ್ಲ:

ಕಾಂಗ್ರೆಸ್‌ ಹಿರಿಯ ಸಂಸದ ಶಶಿ ತರೂರ್‌ ಕೂಡ ಬಹಿರಂಗ ಗೊಳಿಸುವುದನ್ನು ಬೆಂಬಲಿಸಿದ್ದು “ಯಾರು ನಾಮನಿರ್ದೇಶನ ಮಾಡಬಹುದು ಮತ್ತು ಯಾರಿಗೆ ಮತ ಹಾಕಬಹುದು ಎಂಬುದು ಎಲ್ಲರಿಗೂ ತಿಳಿದಿರಬೇಕು. ಇದರಲ್ಲಿ ಯಾವುದೇ ತಪ್ಪಿಲ್ಲ” ಎಂದಿದ್ದಾರೆ.

ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಕೂಡ ತರೂರ್‌ ಧಾಟಿಯಲ್ಲಿಯೇ ಮಾತನಾಡಿದ್ದು “ಪ್ರತಿ ಚುನಾವಣೆಗೆ ಉತ್ತಮವಾಗಿ ವ್ಯಾಖ್ಯಾನಿಸಲಾದ ಮತ್ತು ಸ್ಪಷ್ಟವಾದ ಮತದಾರರ ಪಟ್ಟಿಯಿರಬೇಕು. ತಾತ್ಕಾಲಿಕ ಪಟ್ಟಿಯು ಮತದಾರರ ಪಟ್ಟಿಯಾಗಲು ಸಾಧ್ಯವಿಲ್ಲ” ಎಂದಿದ್ದಾರೆ. ಅಲ್ಲದೇ ʼಸುಧಾರಣಾವಾದಿಗಳು ಬಂಡಾಯಗಾರರಲ್ಲʼ ಎಂದೂ ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!