ಶಿಕ್ಷಣ ಸಚಿವರ ನಿವಾಸದ ಮೇಲೆ ಕಾಂಗ್ರೆಸ್, ಎನ್‍ಎಸ್‍ಯುಐ ಕಾರ್ಯಕರ್ತರ ದಾಳಿಗೆ ಸಂಸದ ನಳಿನ್ ಖಂಡನೆ

ಹೊಸ ದಿಗಂತ ವರದಿ, ಮಂಗಳೂರು:

ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಿವಾಸದ ಮೇಲೆ ಕಾಂಗ್ರೆಸ್ ಹಾಗೂ ಎನ್‍ಎಸ್‍ಯುಐ ಕಾರ್ಯಕರ್ತರು ದಾಳಿ ನಡೆಸಿ ದಾಂಧಲೆ ನಡೆಸಿದ್ದು, ಕಾಂಗ್ರೆಸ್‍ನ ಈ ಗೂಂಡಾ ಪ್ರವೃತ್ತಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರಕಾರ ಮಾಡಿದ ಕೆಲಸವನ್ನು ವಿರೋಧಿಸುವ ಮತ್ತು ಆಂದೋಲನ ಮಾಡುವ ಅಧಿಕಾರ, ಹಕ್ಕು ರಾಜಕೀಯದಲ್ಲಿ ಮತ್ತು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಇದೆ. ಆದರೆ ಆಂದೋಲನವನ್ನು ಮಾಡುವುದು ಬಿಟ್ಟು ಗೂಂಡಾ ವರ್ತನೆ ಮಾಡಿರುವುದು ಖಂಡನೀಯ. ಇದು ಆ ಕಾಂಗ್ರೆಸ್ ನ ಸಂಸ್ಕೃತಿಯನ್ನು ತೋರಿಸುತ್ತದೆ. ಕಾಂಗ್ರೆಸ್‍ನ ಈ ರೀತಿಯ ಗೂಂಡಾ ಪ್ರವೃತ್ತಿಯನ್ನು ನೋಡಿಯೇ ಜನ ಕೇಂದ್ರ ಹಾಗೂ ರಾಜ್ಯದಲ್ಲಿ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ. ಇದೀಗ ಸಚಿವರ ನಿವಾಸದ ಮೇಲೆ ದಾಳಿ ಮಾಡುವುದರ ಮೂಲಕ ಮತ್ತೊಮ್ಮೆ ತಾನು ಗೂಂಡಾ ಪಕ್ಷ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ ಎಂದು ನಳಿನ್ ಹೇಳಿದರು.
ಈ ದಾಳಿ ಒಂದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಬೆಂಗಳೂರು ಅಲ್ಲದೆ ರಾಜ್ಯದ ಇತರ ಭಾಗಗಳಿಂದಲೂ ದಾಳಿ ನಡೆಸಲು ಕಾರ್ಯಕರ್ತರು ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಕಾಂಗ್ರೆಸ್ ಈ ರೀತಿಯ ಕೃತ್ಯಕ್ಕೆ ಇಳಿದಿದೆ. ಜನ ನಿಮ್ಮ ವರ್ತನೆಗೆ ತಕ್ಕ ಉತ್ತರ ನೀಡಲಿದ್ದಾರೆ. ಮುಂದೆ ಈ ತೀತಿಯ ಬೆಳವಣಿಗೆ ಮುಂದುವರಿದರೆ ನಮ್ಮ ಕಾರ್ಯಕರ್ತರು ಸುಮ್ಮನೆ ಕೂರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಸಚಿವರ ನಿವಾಸದ ಮೇಲೆ ನಡೆದ ದಾಳಿ ಬಗ್ಗೆ ಸರಕಾರ ಸಮಗ್ರ ತನಿಖೆ ನಡೆಸಿ ಈ ಕೃತ್ಯದ ಹಿಂದಿರುವ ವ್ಯಕ್ತಿಗಳನ್ನು ಬಂಧಿಸಬೇಕು. ಈಗಾಗಲೇ ದಾಳಿ ನಡೆಸಿದ 15 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಗೃಹ ಸಚಿವರನ್ನು ಅಭಿನಂದಿಸುತ್ತೇನೆ. ಎಲ್ಲ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಅವರು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!