ಕಾಂಗ್ರೆಸ್ ಪಕ್ಷದಿಂದ ದ್ವೇಷದ ರಾಜಕಾರಣ: ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ವಿರೋಧ ಪಕ್ಷವಾದ ಕಾಂಗ್ರೆಸ್ ಸಮಾಜದಲ್ಲಿ ಸಮಸ್ಯೆ- ಗೊಂದಲ ಸೃಷ್ಟಿಸಿ, ದ್ವೇಷ ಬೆಳೆಸುತ್ತಿದೆ ಎಂದು ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ವಿಧಾನಸಭಾ ಕಲಾಪ ನಡೆಯದಂತೆ ನೋಡಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮುಖಂಡರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಅವರು ಸುಳ್ಳು ಮಾಹಿತಿಯನ್ನು ಪದೇಪದೇ ಹೇಳಿ ಅದನ್ನು ಸತ್ಯ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಖಂಡಿಸಿದರು.

ಹಿಜಾಬ್ ಪ್ರಕರಣ ಪ್ರಾರಂಭವಾದಾಗ ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾಗಿ ಸುಳ್ಳು ಹೇಳಿಕೆ ನೀಡಿದ್ದರು. ವಿಧಾನಮಂಡಲದ ಕಾರ್ಯಕಲಾಪ ನಡೆಯದಂತೆ ನೋಡಿಕೊಂಡು ಹಣ ವ್ಯರ್ಥ ಮಾಡಿದ್ದಾರೆ. ಸ್ಪಷ್ಟತೆ, ಸಂಸದೀಯ ಸಂಸ್ಕೃತಿ ಇಲ್ಲದಂತೆ ನಡೆದುಕೊಂಡಿದ್ದಾರೆ.
ಕಾಂಗ್ರೆಸ್‍ನ ವೀರೇಂದ್ರ ಪಾಟೀಲ್, ಕೆ.ಸಿ.ರೆಡ್ಡಿ ಮತ್ತಿತರ ಮುಖಂಡರು ಒಂದು ಸ್ಪಷ್ಟ ಸಂಸ್ಕೃತಿ ಆಚಾರವನ್ನು ಇಟ್ಟುಕೊಂಡಿದ್ದರು. ರಚನಾತ್ಮಕವಾಗಿ ಕೆಲಸ ಮಾಡಬೇಕಾದ ಕಾಂಗ್ರೆಸ್, ರಾಜಕೀಯ ನಿಲುವು ತೆಗೆದುಕೊಂಡಿದೆ. ಪಿಳ್ಳೆ ನೆವ ಮುಂದಿಟ್ಟು, ಹಿಜಾಬ್ ವಿಚಾರ ಚರ್ಚಿಸಲು ಸಿದ್ಧರಿಲ್ಲದೆ ಸದನವನ್ನು ಬಹಿಷ್ಕರಿಸಿದ್ದಾರೆ ಎಂದರು.

ಕಾನೂನು, ವ್ಯವಸ್ಥೆಗೆ ಗೌರವ ಕೊಡುತ್ತಿಲ್ಲ. ವಿಷಯಾಂತರ ಮಾಡಲು ಪ್ರಯತ್ನ ಮಾಡಲಾಗಿದೆ. ಸಚಿವ ಈಶ್ವರಪ್ಪ ಅವರ ಮೇಲೆ ಹಲ್ಲೆ ಮಾಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದರು. ಮಾತಿನಲ್ಲಿ ವಿಚಾರ ಮಂಡಿಸದೆ, ದೈಹಿಕವಾಗಿ ಶಕ್ತಿ ಪ್ರಹಾರ ಮಾಡುವ ಪ್ರವೃತ್ತಿ ತೋರಿದ್ದು ಖಂಡನೀಯ. ಕಾಂಗ್ರೆಸ್‍ನ ತುಷ್ಟೀಕರಣ ನೀತಿಗೆ ಜನರು ಈಗಾಗಲೇ ಪಾಠ ಕಲಿಸಿದ್ದಾರೆ. ಅಲ್ಪಸಂಖ್ಯಾತರ ವಿದ್ಯಾಭ್ಯಾಸ ಮುಂದುವರಿಸಲು ಅಡ್ಡಿ ಮತ್ತು ಅವರ ಉತ್ತಮ ಭವಿಷ್ಯಕ್ಕೆ ಕಲ್ಲು ಹಾಕುವ ದುರುದ್ದೇಶದ ಪ್ರಯತ್ನ ಇದಾಗಿದೆ. ಲಾಲ್ ಚೌಕ್‍ನಲ್ಲಿ ತ್ರಿವರ್ಣ ಧ್ವಜ ಹಾರಿಸಲು ನಮ್ಮ ಪಕ್ಷ ಮುಂದಾಗಿತ್ತು. ರಾಷ್ಟ್ರಧ್ವಜ, ಕರ್ತವ್ಯ ಪಾಲನೆ, ಸಂವಿಧಾನದ ವಿಚಾರದಲ್ಲಿ ಕಾಂಗ್ರೆಸ್ ಪಾಠ ನಮಗೆ ಬೇಕಿಲ್ಲ. ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ- ಶಿವಕುಮಾರ್ ನಡುವಿನ ಪೈಪೋಟಿಯಿಂದ ಸದನದ ಕಲಾಪ ಬಹಿಷ್ಕರಿಸಿದ್ದಾರೆ. ಸದನದ ಖರ್ಚುವೆಚ್ಚವನ್ನು ಕಾಂಗ್ರೆಸ್‍ನಿಂದ ಪಡೆಯುವ ಕುರಿತ ಸಭಾಧ್ಯಕ್ಷರ ಹೇಳಿಕೆಯನ್ನು ಸ್ವಾಗತಿಸುವುದಾಗಿ ತಿಳಿಸಿದರು. ಸಚಿವ ಈಶ್ವರಪ್ಪ ಅವರು ತಪ್ಪು ಹೇಳಿಕೆ ನೀಡಿದ್ದರೆ ಕಾನೂನಿನಡಿ ಪ್ರಕರಣ ದಾಖಲಿಸಬೇಕಿತ್ತು. ಅವರು ರಾಷ್ಟ್ರಧ್ವಜದ ಕುರಿತು ತಪ್ಪು ಹೇಳಿಕೆ ಕೊಟ್ಟಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಕಾಂಗ್ರೆಸ್ ಮುಖಂಡರದು ತಪ್ಪು ನಡವಳಿಕೆ ಎಂದ ಅವರು, ವಿಧಾನಮಂಡಲ ಕಾರ್ಯಕಲಾಪ ಸ್ಥಗಿತಗೊಳಿಸಿದ್ದು ಕಾಂಗ್ರೆಸ್‍ನ ದುರ್ವರ್ತನೆ. ಇದು ಖಂಡನಾರ್ಹ ಎಂದರು.

ಮೇಕೆದಾಟು ಕುರಿತ ಯಾತ್ರೆ ಡಿ.ಕೆ.ಶಿವಕುಮಾರ್ ಪ್ರಚಾರ ಯಾತ್ರೆ. ಮೇಕೆದಾಟು ವಿಚಾರವನ್ನು ರಾಜಕೀಯ ದುರುದ್ದೇಶಕ್ಕಾಗಿ ಕಾಂಗ್ರೆಸ್ ಪಕ್ಷ ಬಳಸಿಕೊಳ್ಳುತ್ತಿದೆ. ಪ್ರಾದೇಶಿಕ ಪಕ್ಷದಂತಿರುವ ಕಾಂಗ್ರೆಸ್ ಪಕ್ಷದಿಂದ ಯಾವತ್ತೂ ಮೇಕೆದಾಟು ಯೋಜನೆ ಜಾರಿಗೊಳಿಸಲು ಸಾಧ್ಯವಿಲ್ಲ. ಅದನ್ನು ಬಿಜೆಪಿ ಅನುಷ್ಠಾನಕ್ಕೆ ತರಲು ಬದ್ಧವಿದೆ. ರಾಮನಗರ ಜಿಲ್ಲೆಯಲ್ಲಿ ಕೇವಲ ಶೇ. 2.5 ಪ್ರದೇಶ ಮಾತ್ರ ನೀರಾವರಿಗೆ ಒಳಗೊಳಪಟ್ಟಿದೆ. ಅಲ್ಲಿನ ಜನಪ್ರತಿನಿಧಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಗೆ ನ್ಯಾಯ ಒದಗಿಸಿಲ್ಲ. ಮೇಕೆದಾಟು ಪಾದಯಾತ್ರೆ ಇನ್ನೊಂದು ನಾಟಕ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!