September 15, 2026
Tuesday, September 15, 2026
spot_img

ಮೋದಿ BRICS ಡಿನ್ನರ್‌ಗೆ ಕಾಂಗ್ರೆಸ್ ಸಿಎಂಗಳ ಗೈರು: ಔತಣಕೂಟದಲ್ಲಿ ಎದ್ದು ಕಂಡ ರಾಜಕೀಯ ಅಂತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

BRICS ಶೃಂಗಸಭೆಯ ರಾಜತಾಂತ್ರಿಕ ಚಟುವಟಿಕೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ಭರ್ಜರಿ ಔತಣಕೂಟದಲ್ಲಿ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳ ಗೈರುಹಾಜರಿ ಎಲ್ಲರ ಕಣ್ಣುಕುಕ್ಕಿದೆ.

ಸೆಪ್ಟೆಂಬರ್ 13ರಂದು BRICS ಶೃಂಗಸಭೆಯ ಔತಣಕೂಟಕ್ಕೆ ಆಹ್ವಾನವಿದ್ದರೂ ಮೂವರು ಕಾಂಗ್ರೆಸ್ ಮುಖ್ಯಮಂತ್ರಿಗಳು ಹಾಜರಾಗಲಿಲ್ಲ, ಇನ್ನು ಉಳಿದಂತೆ ಹಲವರಿಗೆ ಆಹ್ವಾನವಿರಲಿಲ್ಲ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ಯಾರೆಲ್ಲ ಬಂದಿಲ್ಲ?

ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿದೇಶ ಪ್ರವಾಸದಲ್ಲಿದ್ದರೆ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಔತಣಕೂಟದಿಂದ ದೂರ ಉಳಿದಿದ್ದರು. ರೇವಂತ್ ರೆಡ್ಡಿ ಸೆಪ್ಟೆಂಬರ್ 12ರಂದು ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಒಪ್ಪಿಕೊಂಡಿದ್ದರೂ, ಬಳಿಕ ‘ಅನಿವಾರ್ಯ ಕಾರಣಗಳ’ ಹಿನ್ನೆಲೆಯಲ್ಲಿ ಬರಲು ಸಾಧ್ಯವಾಗುವುದಿಲ್ಲ ಎಂದು ಅವರ ಕಚೇರಿ ಸರ್ಕಾರಕ್ಕೆ ತಿಳಿಸಿತ್ತು.

ಇದನ್ನೂ ಓದಿ:

ಯಾರೆಲ್ಲ ಬಂದಿದ್ದರು?

ಇತ್ತ ಬಿಜೆಪಿ ಹಾಗೂ ಮಿತ್ರಪಕ್ಷಗಳ ಆಡಳಿತವಿರುವ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಔತಣಕೂಟದಲ್ಲಿ ಭಾಗವಹಿಸಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಗುಜರಾತ್‌ನ ಭೂಪೇಂದ್ರ ಪಟೇಲ್, ಮಧ್ಯಪ್ರದೇಶದ ಮೋಹನ್ ಯಾದವ್, ರಾಜಸ್ಥಾನದ ಭಜನ್‌ಲಾಲ್ ಶರ್ಮಾ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

ಯಾರಿಗೆ ಸಿಕ್ಕಿಲ್ಲ ಅಹ್ವಾನ?

ವಿರೋಧ ಪಕ್ಷದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಹಾಜರಾಗದಿರುವುದು ವಿಷಾದಕರ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಔತಣಕೂಟಕ್ಕೆ ಆಹ್ವಾನ ನೀಡಲಾಗಿರಲಿಲ್ಲ. ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಮುಖ್ಯಮಂತ್ರಿಗಳಿಗೂ ಆಹ್ವಾನ ಇರಲಿಲ್ಲ ಎಂದು ವರದಿಯಾಗಿದೆ.

ಇದು ಮೊದಲ ಬಾರಿಯಲ್ಲ

ವಿರೋಧ ಪಕ್ಷದ ನಾಯಕರು ಅಧಿಕೃತ ಕಾರ್ಯಕ್ರಮಗಳಿಂದ ದೂರ ಉಳಿದಿರುವುದು ಇದೇ ಮೊದಲಲ್ಲ. 2023ರ ಜಿ20 ಔತಣಕೂಟಕ್ಕೂ ಹಲವು ವಿರೋಧ ಪಕ್ಷಗಳ ಮುಖ್ಯಮಂತ್ರಿಗಳು ಗೈರಾಗಿದ್ದರು. ಇಂತಹ ಬೆಳವಣಿಗೆಗಳು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಅಂತರದ ಚರ್ಚೆಗೆ ಕಾರಣವಾಗುತ್ತಲೇ ಬಂದಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !