September 16, 2026
Wednesday, September 16, 2026
spot_img

ಮಕ್ಕಳ ಸುರಕ್ಷತೆಗೆ ಮಹತ್ವದ ಕ್ರಮ: ಇನ್ಮುಂದೆ ಭಾರತೀಯ ಏಜೆನ್ಸಿಗಳಿಗೆ ಮಾಹಿತಿ ನೀಡಲಿದೆ ಮೆಟಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳ ಆನ್‌ಲೈನ್ ಸುರಕ್ಷತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಒತ್ತಡ ನೀಡಿರುವ ಬೆನ್ನಲ್ಲೇ ಮೆಟಾ ಮಹತ್ವದ ಕ್ರಮ ಕೈಗೊಂಡಿದೆ.

ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ಇತರ ಮಕ್ಕಳ ಸುರಕ್ಷತಾ ಪ್ರಕರಣಗಳನ್ನು ಇನ್ಮುಂದೆ ಭಾರತದಲ್ಲಿನ ಕಾನೂನು ಜಾರಿ ಸಂಸ್ಥೆಗಳಿಗೂ ವರದಿ ಮಾಡಲು ಮೆಟಾ ಒಪ್ಪಿಕೊಂಡಿದೆ ಎನ್ನಲಾಗಿದೆ.

ಮೊದಲು ಹೇಗೆ ಕ್ರಮ ನಡೆಯುತಿತ್ತು?

ಈವರೆಗೆ ಮೆಟಾ, ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅಮೆರಿಕ ಮೂಲದ National Center for Missing & Exploited Children (NCMEC)ಗೆ ಮಾಹಿತಿ ನೀಡುತ್ತಿತ್ತು. ಅಲ್ಲಿಂದ ಇತರ ದೇಶಗಳ ಸಂಬಂಧಿತ ಸಂಸ್ಥೆಗಳೊಂದಿಗೆ ಪ್ರಕರಣಗಳ ಕುರಿತು ಸಮನ್ವಯ ನಡೆಯುತ್ತಿತ್ತು. ಹೊಸ ವ್ಯವಸ್ಥೆಯಡಿ ಇಂತಹ ಪ್ರಕರಣಗಳ ಮಾಹಿತಿಯನ್ನು ನೇರವಾಗಿ ಭಾರತದ ತನಿಖಾ ಸಂಸ್ಥೆಗಳಿಗೂ ಕಳುಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮೆಟಾ ವಿರುದ್ಧ ತನಿಖೆ ನಡೆದ ಬೆನ್ನಲ್ಲೇ ಬೆಳವಣಿಗೆ

ಮೆಟಾ ಅಧಿಕಾರಿಗಳೊಂದಿಗೆ ಸರ್ಕಾರ ಕಳೆದ ಹಲವು ವಾರಗಳಿಂದ ಮಾತುಕತೆ ನಡೆಸುತ್ತಿತ್ತು. ಆಗಸ್ಟ್ 5ರಿಂದ ಕಂಪನಿಯ ಹಿರಿಯ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದರು. ಇದಕ್ಕೂ ಮುನ್ನ ಜುಲೈನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಜಾಹೀರಾತುಗಳು ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ವರದಿಗಳ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮೆಟಾ ಅಧಿಕಾರಿಗಳನ್ನು ಕರೆಸಿ ವಿವರಣೆ ಕೇಳಿತ್ತು.

ಜುಲೈ 3ರಂದು ಪ್ರಕಟವಾದ BBC Eye ತನಿಖಾ ವರದಿಯ ಪ್ರಕಾರ, ಸುಮಾರು 10 ತಿಂಗಳ ಅವಧಿಯಲ್ಲಿ AI ಮೂಲಕ ಸೃಷ್ಟಿಸಲಾದ ಮಕ್ಕಳ ಲೈಂಗಿಕ ದೌರ್ಜನ್ಯ ಚಿತ್ರಗಳನ್ನು ಒಳಗೊಂಡ 332 ಜಾಹೀರಾತುಗಳನ್ನು ಗುರುತಿಸಲಾಗಿತ್ತು. ಅವುಗಳಲ್ಲಿ 84 ಜಾಹೀರಾತುಗಳು ಭಾರತದಲ್ಲಿ ಕಾಣಿಸಿಕೊಂಡಿದ್ದವು.

ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಮೆಟಾಗೆ ನೋಟಿಸ್ ನೀಡಿತ್ತು. ಬಳಿಕ ತನಿಖೆ ಆರಂಭಿಸಿ ಸೆಪ್ಟೆಂಬರ್ 9ರಂದು ಮೆಟಾ ಇಂಡಿಯಾದ ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೂ ದೆಹಲಿ ಪೊಲೀಸರಿಗೆ ತನಿಖೆ ನಡೆಸುವಂತೆ ಸೂಚಿಸಿದೆ.

ಇದು ಮೊದಲ ಹೆಜ್ಜೆಯಷ್ಟೇ

ಇದೇ ವೇಳೆ, ಮೆಟಾ ಕೈಗೊಂಡಿರುವ ಕ್ರಮ ಅಂತಿಮ ಪರಿಹಾರವಲ್ಲ. ಮಕ್ಕಳಿಗೆ ಸುರಕ್ಷಿತ ಡಿಜಿಟಲ್ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದ್ದು, ಇನ್ನೂ ಹಲವು ಕ್ರಮಗಳ ಅಗತ್ಯವಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !