ಹೊಸ ದಿಗಂತ ವರದಿ,ಕಲಬುರಗಿ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಡೀ ತಮ್ಮ ಜೀವನವನ್ನೇ ಕಾಂಗ್ರೆಸ್ ಪಕ್ಷದಲ್ಲಿ ಕಳೆದಿದ್ದಾರೆ. ಆದರೆ ಹಿಂದೆ ಹಲವು ಅವಕಾಶಗಳು ಇದ್ದರೂ ಕಾಂಗ್ರೆಸ್ ಪಕ್ಷ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಕೇಂದ್ರ ಸಾಮಾಜಿಕ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಲೆ ಹೇಳಿದರು.
ಅವಕಾಶ ದೊರೆತರು ಸಿಎಂ ಮಾಡಲಿಲ್ಲ
ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ ಎಂಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕರ್ನಾಟಕದ ಕಾಂಗ್ರೆಸ್ ಹಿರಿಯ ಮತ್ತು ಆಕ್ಟಿವ್ ನಾಯಕ ಮಲ್ಲಿಕಾರ್ಜುನ ಖರ್ಗೆ. ಸಾಕಷ್ಟು ಬಾರಿ ಅವಕಾಶ ದೊರೆತರು ಕಾಂಗ್ರೆಸ್ ಪಕ್ಷ ಅವರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ಬದಲಾಗಿ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿತು ಎಂದು ಹೇಳಿದರು.
ಕಾಂಗ್ರೆಸ್ ಪಾರ್ಟಿಗೆ ಸಿಟ್ಟು ಜಾಸ್ತಿ
ಉತ್ತರ ಪ್ರದೇಶದ ರಾಯಬರೇಲಿಯಲ್ಲಿನ ಸಭೆಯಲ್ಲಿ ಸಂಸದ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ರಾಹುಲ್ ಗಾಂಧಿ ಯಾವಾಗಲೂ “ಗದ್ದಾರ” ಈ ರೀತಿ ಮಾತಾಡ್ತಾ ಇರುತ್ತಾರೆ. ಆದರೆ, ನಾವೇನು ಆ ರೀತಿ ಮಾತನಾಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ 3ನೇ ಬಾರಿಗೆ ಗೆದ್ದು ಅಧಿಕಾರಕ್ಕೆ ಬಂದಿರುವುದರಿಂದ ಕಾಂಗ್ರೆಸ್ ಪಾರ್ಟಿಗೆ ಸಿಟ್ಟು ಜಾಸ್ತಿ ಎಂದರು.
2029ಕ್ಕೆ ಮತ್ತೆ ಮೋದಿ ಅಧಿಕಾರ
ಕಳೆದ ಲೋಕಸಭಾ ಚುನಾವಣೆ ವೇಳೆ ಸಂವಿಧಾನ ಬದಲಾಯಿಸುತ್ತಾರೆ ಎಂದು ಸುಳ್ಳು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಒಂದಿಷ್ಟು ಲಾಭ ಕಾಂಗ್ರೆಸ್ ಪಕ್ಷಕ್ಕಾಯಿತು. ಅದಕ್ಕಾಗೇ ಇಂದು ವಿರೋಧ ಪಕ್ಷದ ಸ್ಥಾನದಲ್ಲಿದೆ.ಇದಕ್ಕೆ ನಮ್ಮ ಅಭಿನಂದನೆಗಳು ಸದಾ ಇದೆ. ನೀವು ಯಾವಾಗಲೂ ವಿರೋಧ ಪಕ್ಷದಲ್ಲೇ ಇರ್ತಾ ಇರಿ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2029ಕ್ಕೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.



