ಕಾಂಗ್ರೆಸ್ಸಿನ ದೇಣಿಗೆ ಅಭಿಯಾನ ಫ್ಲಾಪ್ ಆಯ್ತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಪಕ್ಷದ ಖಜಾಂಚಿ ಅಜಯ ಮಾಕನ್ ಅವರು ಡಿಸೆಂಬರ್ 16ರಂದು ತಮ್ಮ ಎಕ್ಸ್ ಖಾತೆ ಮೂಲಕ ಪಕ್ಷವು ಡೋನೇಟ್ ಫಾರ್ ದೇಶ್ ಎಂಬ ದೇಣಿಗೆ ಅಭಿಯಾನ ಹಮ್ಮಿಕೊಂಡಿರುವುದಾಗಿ ಪ್ರಕಟಿಸಿದ್ದರು. ಡಿಸೆಂಬರ್ 18ರಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ 1,38,000 ರುಪಾಯಿಗಳನ್ನು ನೀಡುವ ಮೂಲಕ ಚಾಲನೆ ನೀಡಿದ್ದರು.

ಇದೀಗ ಡಿಸೆಂಬರ್ 25ರಂದು ಅಜಯ್ ಮಾಕನ್ ಅವರು ನೀಡಿರುವ ಅಂಕಿಅಂಶದ ಪ್ರಕಾರ ಒಂದು ವಾರದಲ್ಲಿ 5.35 ಕೋಟಿ ರುಪಾಯಿಗಳ ಸಂಗ್ರಹವಾಗಿದೆ. ಇದು ಸಾಮಾಜಿಕ ತಾಣಗಳಲ್ಲಿ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಐದು ಕೋಟಿ ರುಪಾಯಿಗಳು ಸಣ್ಣ ಮೊತ್ತ ಅಲ್ಲದೇ ಇರಬಹುದು. ಆದರೆ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ನೋಡಿದಾಗ ಈ ಮೊತ್ತವು ಬಹಳ ಚಿಕ್ಕದಾಗಿಯೇ ಕಾಣಿಸುತ್ತದೆ. ಹಾಗಾದರೆ, ಕಾಂಗ್ರೆಸ್ ಪ್ರಾರಂಭಿಸಿದ ದೇಣಿಗೆ ಅಭಿಯಾನಕ್ಕೆ ಭಾರಿ ಬೆಂಬಲ ಇಲ್ಲ ಎಂಬುದನ್ನು ಇದು ಸೂಚಿಸುತ್ತಿದೆಯೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಕಾಂಗ್ರೆಸ್ ಏನೋ ಇಷ್ಟು ಮೊತ್ತವನ್ನು ನೀಡುವುದಕ್ಕೆ 2 ಲಕ್ಷ ಜನ ನಮ್ಮೊಂದಿಗೆ ಸೇರಿದ್ದಾರೆ ಎಂದು ಸಂಭ್ರಮದಿಂದ ಹೇಳಿಕೊಂಡಿದೆ. ಆದರೆ, ಡಿಸೆಂಬರ್ 28ಕ್ಕೆ ತನ್ನ 138ನೇ ವಾರ್ಷಿಕ ದಿನ ಆಚರಿಸಿಕೊಳ್ಳುತ್ತಿರುವ ಕಾಂಗ್ರೆಸ್ಸಿಗೆ, ಇದೇ ಹಿನ್ನೆಲೆಯಲ್ಲಿ ಕೊಟ್ಟಿದ್ದ ದೇಣಿಗೆ ಕರೆಗೆ ಪ್ರತಿಯಾಗಿ 5 ಕೋಟಿ ರುಪಾಯಿಗಳಷ್ಟೇ ಸಂಗ್ರಹವಾಗಿರುವುದನ್ನು ಯಶಸ್ಸು ಎಂದು ಹೇಳಲಾದೀತೆ ಎಂದು ಟೀಕಾಕಾರರು ಪ್ರಶ್ನಿಸುತ್ತಿದ್ದಾರೆ.

ದೇಣಿಗೆ ಅಭಿಯಾನ ಪ್ರಾರಂಭಿಸಿದ ಮೊದಲ ದಿನವೇ 1.45 ಕೋಟಿ ರುಪಾಯಿಗಳು ಸಂಗ್ರಹವಾಗಿವೆ ಎಂದು ಅಜಯ್ ಮಾಕನ್ ಪ್ರಕಟಿಸಿದ್ದರು. ನಂತರದ ದಿನಗಳಲ್ಲಿ ಜನರಿಂದ ಅಷ್ಟೇನೂ ತೀವ್ರ ಪ್ರತಿಕ್ರಿಯೆ ದೊರೆಯದಾಯಿತೇ ಎಂಬ ಪ್ರಶ್ನೆಯನ್ನು ಮಾಕನ್ ಅವರು ಈಗ ಹಂಚಿಕೊಂಡಿರುವ ಅಂಕಿಅಂಶಗಳು ಎತ್ತುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!