ಹೊಸದಿಗಂತ ವರದಿ, ದಾವಣಗೆರೆ :
ಸದನದಲ್ಲಿ ಬಿಜೆಪಿ ಶಾಸಕರನ್ನು ಮಾರ್ಷಲ್ ಗಳ ಮೂಲಕ ಎತ್ತಿ ಹೊರಹಾಕಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಐಸಿಯು ವಾರ್ಡ್ ನಲ್ಲೇ ಇದೆ. ಸ್ಪೀಕರ್ ಆಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ. ಹನಿಟ್ರ್ಯಾಪ್, ಮುಸ್ಲಿಮ್ ಮೀಸಲಾತಿ ವಿಚಾರವಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ 18 ಜನ ಬಿಜೆಪಿ ಶಾಸಕರನ್ನು ಮಾರ್ಷಲ್ ಗಳ ಮೂಲಕ ಸದನದಿಂದ ಹೊರ ಹಾಕಿಸಿದ್ದು ಸರಿಯಲ್ಲ. ಹಿರಿಯ ಸಚಿವರ ಕುರಿತಂತೆ ಹನಿಟ್ರ್ಯಾಪ್ ಚರ್ಚೆಯಾಗಿ, ತನಿಖೆಗೆ ಆದೇಶ ಆಗಬೇಕಾಗಿತ್ತು. ಆದರೆ, ಶಾಸಕರ ಗೌರವಕ್ಕೆ ಧಕ್ಕೆ ಮಾಡಲಾಗಿದೆ. ಸರ್ಕಾರದ ನಡೆಯನ್ನು ಜನತೆ ಗಮನಿಸುತ್ತಿದೆ ಎಂದರು.
ನಮ್ಮ ಸರ್ಕಾರವಿದ್ದಾಗ ಸಿದ್ದರಾಮಯ್ಯ ವೀರಾವೇಶದಿಂದಲೇ ಗೂಂಡಾಗಿರಿ ಮಾಡಿದ್ದರು. ಇದೇ ಸಿದ್ದರಾಮಯ್ಯ ವಿಪಕ್ಷದಲ್ಲಿದ್ದಾಗ ಸಭಾಪತಿಗಳಿಗೆ ಎಷ್ಟು ಸಲ ಅಪಮಾನ ಮಾಡಿದ್ದಾರೆ. ಅದನ್ನೆಲ್ಲಾ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿನವರು ಮರೆತಿದ್ದಾರಾ? ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡುವ ಮಸೂದೆಯು ಸದನದಲ್ಲಿ ಚರ್ಚೆಯೇ ಆಗದೆ ಮಂಡನೆಯಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮುಸ್ಲಿಮ್ ಗುತ್ತಿಗೆ ಮೀಸಲು ರದ್ದುಪಡಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.