ಜನರಿಗೆ ಕುಡಿಯುವ ನೀರು ಕೊಡುವ ಯೋಗ್ಯತೆ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ: ಪಿ.ರಾಜೀವ್

 ಹೊಸದಿಗಂತ ವರದಿ, ದಾವಣಗೆರೆ:

ಜನರಿಗೆ ಕುಡಿಯುವ ನೀರು ಕೊಡುವ ಯೋಗ್ಯತೆಯೂ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಸೋತು ಶರಣಾಗಿದೆ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಕುಡಚಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಕೈಕೊಟ್ಟು, ರಾಜ್ಯಾದ್ಯಂತ ಕುಡಿಯುವ ನೀರಿನ ಹಾಹಾಕಾರ ಏರ್ಪಡುತ್ತಿದೆ. ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸೋತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ, ರಾಜ್ಯದ ಸಂಬಂಧಗಳ ಮೂಲಕ ಎಲ್ಲಾ ಅನುದಾನ ಬಂದಿದ್ದರೂ ಸಹ ಕಾಂಗ್ರೆಸ್ಸಿನವರು ಬೀದಿಯಲ್ಲಿ ನಿಂತು ಕೂಗುತ್ತಿದ್ದಾರೆ. ಜನರಿಗೆ ನೀರು, ಜಾನುವಾರುಗಳಿಗೆ ಮೇವು ಒದಗಿಸುವುದನ್ನು ಬಿಟ್ಟು ವಿಧಾನಸೌಧದಲ್ಲಿ ಪಾಕಿಸ್ಥಾನ ಜಿಂದಾಬಾದ್ ಅಂತಾ ಕೂಗಿದ್ದಾರೆ. ಇಂತಹವರಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.

ಯಾವುದೇ ಸರ್ಕಾರದ ಘೋಷಣೆಗಳು ಜನಪರ ಇರಬೇಕು. ಕೇಂದ್ರ ಸರ್ಕಾರದಿಂದ ಒಂದಕ್ಕಿಂತ ಹೆಚ್ಚು ಯೋಜನೆಗಳನ್ನು ಪಡೆದುಕೊಂಡ ಕುಟುಂಬಗಳ ಸಂಖ್ಯೆ 34 ಲಕ್ಷದಷ್ಟಿದ್ದು, ಮಾ.1ರಿಂದ 3ರವರೆಗೆ ಬಿಜೆಪಿಯಿಂದ ರಾಜ್ಯಾದ್ಯಂತ ಫಲಾನುಭವಿಗಳ ಸಂಪರ್ಕ ಅಭಿಯಾನ ನಡೆಸಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. 74 ಸಾವಿರ ಕಾರ್ಯಕರ್ತರನ್ನು ಅಭಿಯಾನದಲ್ಲಿ ಜೋಡಣೆ ಮಾಡಲಾಗಿದೆ. 3 ದಿನದಲ್ಲಿ 1.20 ಕೋಟಿ ಮತದಾರರನ್ನು ಸಂಪರ್ಕಿಸುವ ಅಭಿಯಾನ ಇದಾಗಿದೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!