ಹೊಸದಿಗಂತ ವರದಿ, ಧಾರವಾಡ:
ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆಯುವುದರ ಹಿಂದೆ ಮತ ಬ್ಯಾಂಕ್ ನ ದುರುದೇಶ ಅಡಗಿದೆ. ಈ ಮೂಲಕ ದ್ವೇಷ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಸಮಾಜದ ಸ್ವಾಸ್ಥ್ಯ ಕಾಪಾಡುವುದು ಇಷ್ಟವಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಈ ಹಿಂದೆ ನಡೆದ ಹಲವು ಪ್ರಕರಣಗಳನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಚರ್ಚೆ ನಡೆಸುತ್ತಿದೆ. ಕೇಸ್ ವಾಪಾಸ್ಸು ಪಡೆಯುವ ಮುನ್ನ ಪೂರ್ಣ ಪ್ರಮಾಣದಲ್ಲಿ ಪರಾಮರ್ಶಿಸಬೇಕು. ಅದರ ಡೆಪ್ತ್ ಏನಿದೆ ಅಂತಾ ನೋಡಬೇಕು. ಅದನ್ನು ಬಿಟ್ಟು ಏಕಾಏಕಿ ಕೇಸ್ ಹಿಂಪಡೆಯುವುದು ಸರಿಯಲ್ಲ ಎಂದರು.
ಕೇಸ್ ಹಿಂಪಡೆಯುವುದರಿಂದ ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಠಾಣೆಗೆ ಬೆಂಕಿ ಇಡಲು ಮುಂದಾಗಿದ್ದ ಗಲಭೆಕೋರರು ಬಚಾವ್ ಆಗಬಹುದು. ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸುವ ಮೂಲಕ ಗಲಭೆಕೋರರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರಕ್ಕೆ ಸಮಾಜವನ್ನು ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುವುದು ಇಷ್ಟವಿಲ್ಲ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರವು ಜಾಹೀರಾತಿಗಾಗಿ ಸುಮಾರು 17 ಕೋಟಿ ರೂ. ವ್ಯಯಿಸಿದೆ. ಜಾಹೀರಾತು ಹೆಸರಿನಲ್ಲಿ ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡಲಾಗುತ್ತಿದೆ. ಆ ಹಣದಲ್ಲಿಯೇ ಒಂದು ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯಾಗಿ ಅಭಿವೃದ್ಧಿಪಡಿಸಬಹುದಾಗಿತ್ತು. ಆದರೆ, ಜಾಹೀರಾತು ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರವು ಜನರ ತೆರಿಗೆ ಹಣವನ್ನೇ ವ್ಯಯ ಮಾಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದಕರು.
ತಮ್ಮ ವಿರುದ್ಧ ದೂರು ಕೊಟ್ಟಿರುವುದರ ಹಿಂದೆ ಯಾರಿದ್ದಾರೆ ಎಂಬ ವಿಚಾರ ನನಗೆ ಗೊತ್ತಿದೆ. ನನ್ನ ಕೇಸ್ ೨೦೧೨ರಿಂದಲೂ ಎಸ್.ಐ.ಟಿ ಯಲ್ಲಿ ನಡೆಯುತ್ತಿದೆ. 10 ವರ್ಷವಾದರೂ ಅದನ್ನು ಯಾಕೆ ಇನ್ನೂ ಜೀವಂತವಾಗಿಟ್ಟುಕೊಂಡಿದ್ದೀರಿ? ಈ ಬಗ್ಗೆ ಸರ್ಕಾರ ನಡೆಸುತ್ತಿರುವವರೇ ಹೇಳಬೇಕು. ತನಿಖೆ ನಡೆಯುತ್ತಿದೆ, ನ್ಯಾಯಾಲಯದಲ್ಲಿಯೇ ನಾನು ಉತ್ತರ ನೀಡುತ್ತೇನೆ, ಅಲ್ಲೇ ಹೋರಾಟ ಮಾಡುತ್ತೇನೆ. ಅದರ ಬಗ್ಗೆ ಇಲ್ಲಿ ಚರ್ಚೆ ಆಗುವುದು ಬೇಡ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ವೆಸ್ಟೆಂಡ್ ಹೊಟೆಲ್ ನಲ್ಲಿದ್ದುದು ನಿಜ. ಆಗ ನನ್ನ ಜೊತೆಗಿದ್ದ ಶಾಸಕ ಬಾಲಕೃಷ್ಣ ನನಗೆ ಚೂರಿ ಹಾಕಿ, ಬಿಟ್ಟು ಹೋಗಿದ್ದಾರೆ. ಈಗ ತಮ್ಮ ತೆವಲು ತೀರಿಸಿಕೊಳ್ಳಲು ನನ್ನ ವಿರುದ್ಧ ಹೇಳಿಕೆ ನೀಡಿದರೆ, ನಾನು ಅಂತಹವರಿಗೆ ಉತ್ತರ ಕೊಡಬೇಕಾ? ಇದೇ ಬಾಲಕೃಷ್ಣ ಬಗ್ಗೆ ಸಿದ್ದರಾಮಯ್ಯ, ಹೆಚ್.ಸಿ.ಮಹದೇವಪ್ಪ ವಿಧಾನಸಭೆಯಲ್ಲಿ ಆರೋಪ ಮಾಡಿದ್ದರು. ೬೦೦ ಕೋಟಿ ರೂ. ಕಾಮಗಾರಿ ಮಾಡದೇ, ಬಿಲ್ ಮಾಡಿಕೊಂಡಿದ್ದಾರೆಂದು ಸದನ ಸಮಿತಿ ರಚಿಸಿದ್ದರು. ಈಗ ಅಂತಹವರನ್ನೇ ಸಿಎಂ ತಮ್ಮ ಜೊತೆಗಿಟ್ಟುಕೊಂಡಿದ್ದಾರೆ ಎಂದು ಅವರು ಕುಟುಕಿದರು.