ಹೊಸದಿಗಂತ ವರದಿ, ಮಂಗಳೂರು:
ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅಕಾರಕ್ಕೆ ಏರಿದ ಆರು ತಿಂಗಳೊಳಗೆ ಜನಪ್ರಿಯತೆ ಕಳೆದುಕೊಂಡ ಸರ್ಕಾರ ಇದ್ದರೆ ಅದು ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರ ರೈತರ, ಬಡವರ, ದಲಿತರ ವಿರೋ ಸರ್ಕಾರವಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ನಾವು ಯಾಕಾದರೂ ಇಂತಹ ಸರ್ಕಾರ ಬರಲು ಮತ ನೀಡಿದೆವು ಎಂದು ಮತದಾರರು ತಮ್ಮನ್ನು ತಾವು ಪ್ರಶ್ನೆ ಮಾಡುವಂತೆ ಆಗಿದೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬುಧವಾರ ಮಂಗಳೂರಿಗೆ ಮೊದಲ ಭೇಟಿ ನೀಡಿದ ಅವರು, ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ
ರಾಜ್ಯದಲ್ಲಿ ಬರಗಾಲವಿದ್ದು, ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ರೈತರ ಗೋಳನ್ನು ಕೇಳುವವರೇ ಇಲ್ಲ. ಅಕಾರಿಗಳು ಯಾವುದೇ ಸಭೆ ನಡೆಸುತ್ತಿಲ್ಲ. ಸರ್ಕಾರ ಅಕಾರದ ಅಮಲಿನಲ್ಲಿದೆ. ಕಾಂಗ್ರೆಸ್‌ನ ಹೈಕಮಾಂಡ್ ಮುಖಂಡರು ಬೆಂಗಳೂರಿಗೆ ಆಗಮಿಸಿ ಸಭೆ ನಡೆಸಿದ್ದು, ಸರ್ಕಾರ ಬರ ಪರಿಹಾರ ಘೋಷಣೆ ಮಾಡುತ್ತದೆ ಅಂದುಕೊಂಡಿದ್ದೆವು. ಆದರೆ, ರೈತರ ಬದಲಾಗಿ ನಿಗಮ ಮಂಡಳಿ ನೇಮಕ ಹಾಗೂ ಲೋಕಸಭಾ ಚುನಾವಣಾ ಕಾಂಗ್ರೆಸ್ ಸರ್ಕಾರದ ಈಗಿನ ಆದ್ಯತೆಯಾಗಿದೆ ಎಂದು ಟೀಕಿಸಿದರು.
ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಬೇಸಿಗೆಯಲ್ಲೂ ದಿನಕ್ಕೆ ಏಳು ಗಂಟೆ ವಿದ್ಯುತ್ ಪೂರೈಕೆ ಆಗುತ್ತಿತ್ತು. ಈಗ ಎರಡು ಗಂಟೆಯೂ ವಿದ್ಯುತ್ ದೊರೆಯುತ್ತಿಲ್ಲ. ಸಿಎಂ ಮನೆ ನವೀಕರಣ, ಮಂತ್ರಿಗಳಿಗೆ ಹೊಸ ಕಾರು ಖರೀದಿಯಂತಹ ಅವಿವೇಕದ ಪ್ರದರ್ಶನ ಮಾಡಲಾಗುತ್ತಿದೆ. ಆ ಮೂಲಕ ರೈತರಿಗೆ ಸರಕಾರ ಅವಮಾನ ಮಾಡುತ್ತಿದೆ. ಇದೊಂದು ಹೊಣೆಗೇಡಿ ಸರಕಾರವಾಗಿದೆ ಎಂದರು.
ಜನರ ವಿಶ್ವಾಸ ಕಳೆದುಕೊಂಡ ರಾಜ್ಯ ಸರಕಾರ
ಎಲ್ಲ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಪದೇ ಪದೇ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಾರೆ. ಹಾಗಾದರೆ ರಾಜ್ಯ ಸರ್ಕಾರಕ್ಕೆ ಯಾವುದೇ ಜವಾಬ್ದಾರಿ ಇಲ್ಲವೇ? ಹಣಕಾಸಿನ ಕೊರತೆ ಇದೆಯೇ? ರಾಜ್ಯ ಸರಕಾರ ಅಭಿವೃದ್ಧಿಗೆ ಒಂದು ರೂಪಾಯಿ ಅನುದಾನವನ್ನೂ ನೀಡುತ್ತಿಲ್ಲ. ಸರಕಾರ ಅನುದಾನ ನೀಡದ ಕಾರಣ ಆಡಳಿತ ಪಕ್ಷದ ಶಾಸಕರಿಗೇ ಕ್ಷೇತ್ರದಲ್ಲಿ ಗೌರವಯುತವಾಗಿ ಓಡಾಟ ನಡೆಸದಂತೆ ಆಗಿದೆ. ರಾಜ್ಯ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದರು.
ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಬಗ್ಗೆ ಕಳೆದ ಆರು ತಿಂಗಳಿನಿಂದ ಎಲ್ಲರೂ ಪ್ರಶ್ನಿಸುತ್ತಿದ್ದರು. ಇದೀಗ ಬಿಜೆಪಿ ವರಿಷ್ಠರು ಜವಾಬ್ದಾರಿ ನೀಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ. ಪ್ರತಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕ ಬಳಿಕ ಕಾರ್ಯಕರ್ತರು ಉತ್ಸಾಹದಿಂದಿದ್ದು, ಎಲ್ಲ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದೇವೆ. ಬಿಜೆಪಿಯ ಯಾವುದೇ ಶಾಸಕರು, ಮುಖಂಡರು ಪಕ್ಷ ಬಿಡುವುದಿಲ್ಲ ಎಂದು ವಿಜಯೇಂದ್ರ ಹೇಳಿದರು.
ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ಮೇಯರ್ ಸುರ್ ಶೆಟ್ಟಿ ಕಣ್ಣೂರು, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಮುಖಂಡರಾದ ರಾಜೇಶ್ ಕಾವೇರಿ, ಬೃಜೇಶ್ ಚೌಟ, ರವೀಂದ್ರ ಶೆಟ್ಟಿ ಉಳಿದೊಟ್ಟು, ಜಗದೀಶ ಶೇಣವ, ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.