ಹೊಸದಿಗಂತ ವರದಿ ಹಾವೇರಿ :
ಭ್ರಷ್ಟಾಚಾರವನ್ನು ಆರಂಭಿಸಿದ್ದೇ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯ ತಾತ. ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ಇನ್ನೊಂದು ಹೆಸರೇ ಕಾಂಗ್ರೆಸ್. ಭ್ರಷ್ಟಾಚಾರದ ಒಂದು ಫಲಾನುಭವಿ ರಾಹುಲ್ ಗಾಂಧಿ ಹೀಗಾಗಿ ಅವರು ಬೇಲ್ ಮೇಲೆ ಹೊರಗಡೆ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದರು.
ಮಂಗಳವಾರ ವಿವಿಧ ಕಾರ್ಯಕ್ರಮಗಳನ್ನು ಭಾಗಿ ಆಗುವುದಕ್ಕೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಸ್ಲೀಮರು ಅಲ್ಪ ಸಂಖ್ಯಾತರಲ್ಲ ಆ ಸಮುದಾಯವನ್ನು ಅಲ್ಪ ಸಂಖ್ಯಾತ ಕೋಟಾದಿಂದ ತಗೆಯುವ ಮಾತುಗಳು ಕೇಳಿಬರುತ್ತಿವೆ. ಪ್ರಸಕ್ತ ಈ ಸಮುದಾಯವನ್ನು ಅಲ್ಪಸಂಖ್ಯಾತ ಕೋಟಾದಿಂದ ತಗೆಯುವ ಚಿಂತನೆಯನ್ನು ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರೀಯಿಸಿದ ಕಟೀಲು ಅವರು. ಪ್ರಸಕ್ತ ಎಸ್ಸಿ, ಎಸ್ಟಿ ಎರಡು ಸಮುದಾಯದ ಬೇಡಿಕೆಗಳನ್ನು ಇಡೇರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಮುಂದೆ ಹತ್ತಾರು ಯೋಚನೆಗಳು ಸರ್ಕಾರದ ಮುಂದಿವೆ ಈ ಕುರಿತು ಸರ್ಕಾರ ಯೋಚಿಸುತ್ತದೆ ಎಂದರು.
ಎಸ್ಸಿ, ಎಸ್ಟಿ ಮೀಸಲಾತಿ ಘೋಷಣೆ ಮಾಡಿದ್ದರೂ ಇದು ಈ ಸಮುದಾಯದ ಜನತೆಗೆ ಮೂಗಿಗೆ ತುಪ್ಪ ಒರೆಸುವ ಕೆಲಸ ಎಂದು ಸಿದ್ದರಾಮಯ್ಯ ಆಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರು ಅಹಿಂದ್ ಚಳುವಳಿಯ ಮೂಲಕನೇ ಅಧಿಕಾರಕ್ಕೆ ಬಂದವರು. ಅವರು ಐದು ವರ್ಷ ಆಡಳಿತ ಮಾಡಿದರು ಆ ಸಂದರ್ಭದಲ್ಲಿ ಈ ಸಮುದಾಯಗಳಿಗೆ ನ್ಯಾಯವನ್ನು ಒದಗಿಸುವ ಕೆಲಸವನ್ನು ಮಾಡದವರು ಈಗ ಬಿಜೆಪಿ ಸರ್ಕಾರ ಈ ಸಮುದಾಯಕ್ಕೆ ನ್ಯಾಯ ಒದಗಿಸುವ ಸಂದರ್ಭದಲ್ಲಿ ಇಂತಹ ಅಸಮಾಧಾನ ಏಕೆ ಈ ಸಮುದಾಯಗಳಿಗೆ ನ್ಯಾಯವನ್ನು ಒದಗಿಸಿ ಕೊಡಲಿಲ್ಲವೇಕೆ ಎಂದು ಪ್ರಶ್ನಿಸಿದರು.
ಅವರು ಮುಖ್ಯಮಂತ್ರಿ ಆಗಿದ್ದ ಕಾಲಘಟ್ಟದಲ್ಲಿ ಯಾವ ತೀರ್ಮಾನಗಳನ್ನು ತಗೆದುಕೊಳ್ಳದ ಮುಖ್ಯಮಂತ್ರಿಗಳಾಗಿದ್ದರು. ಇದನ್ನು ಮುಚ್ಚಿ ಹಾಕುವುದಕ್ಕೆ ಒಂದು ಆಯೋಗವನ್ನು ರಚಿಸಿ ಅದನ್ನು ಮುಚ್ಚಿಹಾಕಿದರು. ವೀರಶೈವ ಲಿಂಗಾಯತ ಸಮುದಾಯವನ್ನು ಒಡೆದರು. ಈ ಕುರಿತು ಅವರಿಗೆ ಮಾತನಾಡುವ ನೈತಿಕತೆಯೇ ಇಲ್ಲ. ಇವರು ಒಳ್ಳೆಯದನ್ನು ಏನು ಮಾಡಿದ್ದಾರೆ?. ನಾವು ಈ ಸಮುದಾಯಕ್ಕೆ ಒಳ್ಳೆಯದನ್ನು ಮಾಡಿದ್ದೇವೆ ಎಂದರೆ ಸಹಜವಾಗಿ ಅದರ ಕ್ರೆಡಿಟ್ ನಾವೇ ತಗೆದುಕೊಳ್ಳುತ್ತೇವೆ ಇದರಲ್ಲಿ ಏನು ತಪ್ಪಿದೆ ಎಂದು ಸಿದ್ದರಾಮಯ್ಯ ಅವರ ಮಾತಿಗೆ ತೀಕ್ಷಣವಾಗಿ ತಿರುಗೇಟು ನೀಡಿದರು.
ಕೇಂದ್ರ ಸರ್ಕಾರ ನೀಡಿದ ಅಕ್ಕಿಯಿಂದ ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆ ಎನ್ನದೆಂದು ಪಟ ಹಾಕಿಕೊಂಡು ತಿರುಗಾಡಿದ್ದಾರೆ. ಈ ಯೋಜನೆಯಲ್ಲಿ ಇವರದೇನು(ಕಾಂಗ್ರೆಸ್ ಸರ್ಕಾರದ) ಹಣವಿತ್ತು ಅದರಲ್ಲಿ ಹಾಗೆ ಹೇಳಿಕೊಳ್ಳುವುದಕ್ಕೆ ಯಾವ ನೈತಿಕತೆ ಇದೆ ಇವರಿಗೆ ಎಂದು ಹೇಳಿದರು.