ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಮುಂದೆ ಮಂಡಿಯೂರಿದೆ: ಛಲವಾದಿ ನಾರಾಯಣಸ್ವಾಮಿ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ದೇಶದಲ್ಲಿ ಒಂದೆಡೆ ಸ್ವಾತಂತ್ರ್ಯದ 75ನೇ ವರ್ಷಾಚರಣೆ ನಡೆದರೆ ಮತ್ತೊಂದೆಡೆ ಸಿದ್ದರಾಮಯ್ಯನವರು ತಮ್ಮ 75ನೇ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯ ವೇದಿಕೆಯಲ್ಲಿ ಈ ಉತ್ಸವ ನಡೆಯುತ್ತದೆ. ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಶರದ್ ಪವಾರ್, ಮಮತಾ ಬ್ಯಾನರ್ಜಿ, ಗುಂಡೂರಾವ್ ಮತ್ತಿತರರು ಶಕ್ತಿ ಪ್ರದರ್ಶನ ಪ್ರದರ್ಶನ ಮಾಡಲು ಹೋಗಿ ಪೆಟ್ಟು ತಿಂದಿದ್ದರು. ಆದರೆ, ಹೈಕಮಾಂಡ್ ಈಗ ನಡೆಯುತ್ತಿರುವ ಸಿದ್ದರಾಮೋತ್ಸವದ ಬಗ್ಗೆ ಚಕಾರ ಎತ್ತಿಲ್ಲ. ಇದು, ಹೈಕಮಾಂಡ್ ಸಿದ್ದರಾಮಯ್ಯನವರ ಮುಂದೆ ಮಂಡಿಯೂರಿದ್ದರ ಸಂಕೇತ ಎಂದು ರಾಜ್ಯ ಬಿಜೆಪಿ ವಕ್ತಾರ ಹಾಗೂ ವಿಪ ಸದಸ್ಯ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡದಿದ್ದ ಕಾಂಗ್ರೆಸ್ ಹೈಕಮಾಂಡ್ ಚಿಕ್ಕದಾಗಿದೆ. ಚಿಕ್ಕ ಸಿದ್ದರಾಮಯ್ಯ ದೊಡ್ಡದಾಗಿದ್ದಾರೆ. ಅನ್ನ ಹಳಸಿತ್ತು. ನಾಯಿ ಹಸಿದಿತ್ತು ಎಂಬುದು ಕಾಂಗ್ರೆಸ್- ಸಿದ್ದರಾಮಯ್ಯನವರಿಗೆ‌ ಚೆನ್ನಾಗಿ ಅನ್ವಯ ಆಗುತ್ತದೆ ಎಂದು ಅವರು ಲೇವಡಿ ಮಾಡಿದ್ದಾರೆ.
60-65 ವರ್ಷಗಳಿಂದ ದಲಿತ ಮುಖ್ಯಮಂತ್ರಿ ಆಗಬೇಕೆಂಬ ಕೂಗು ಕಾಂಗ್ರೆಸ್ ಪಕ್ಷದಲ್ಲಿದೆ. ದಲಿತರು ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣವಾಗಿ ಮೂಲೆಗುಂಪಾಗಿದ್ದಾರೆ. ಅವರನ್ನು ಮತಬ್ಯಾಂಕಾಗಿ ಬಳಸಿ ಕಾಂಗ್ರೆಸ್ ವಂಚಿಸಿದೆ. ದಲಿತರ ಸಮಾಧಿಯನ್ನು ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಸೇರಿ ಕಟ್ಟಿದ್ದಾರೆ ಎಂದು ಆರೋಪಿಸಿದರು.
ಡಾ. ಪರಮೇಶ್ವರರನ್ನು ಸೋಲಿಸಿದರು. ಮಲ್ಲಿಕಾರ್ಜುನ ಖರ್ಗೆಗೆ ಕೊಡಬಾರದ ಹಿಂಸೆ ಕೊಟ್ಟು ರಾಜ್ಯದಿಂದ ಓಡಿಸಿದರು. ಕೆ.ಎಚ್.ಮುನಿಯಪ್ಪನವರಿಗೆ ಅವರ ಕ್ಷೇತ್ರದಲ್ಲಿ ಭವಿಷ್ಯ ಇಲ್ಲದಂತೆ ಮಾಡಿದ್ದಾರೆ. ಮಹದೇವಪ್ಪ, ಧ್ರುವನಾರಾಯಣರನ್ನು ಸೋಲಿಸಿದರು. ಬಸವಲಿಂಗಪ್ಪ ಅವರು 1992-93ರಲ್ಲಿ ಸಿಎಂ ಆಗಲು ತೀರ್ಮಾನ ಆಗಿತ್ತು. ಆದರೆ, ವೀರಪ್ಪ ಮೊಯಿಲಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಬಸವಲಿಂಗಪ್ಪ ಅವರು ಅನಾರೋಗ್ಯದಿಂದ ಸಾಯುವಂತಾಯಿತು ಎಂದರು.
ಸಿದ್ದರಾಮಯ್ಯರಿಗೆ ಪಕ್ಷದೊಳಗೆ ಶೇ 70-80ರಷ್ಟು ವಿರೋಧಿಗಳಿದ್ದಾರೆ. ಹೈಕಮಾಂಡ್ ಸಿದ್ದರಾಮಯ್ಯರನ್ನು ಬೆಂಬಲಿಸುವ ಕಾರಣ ಯಾರೂ ಮಾತನಾಡುತ್ತಿಲ್ಲ. ದಲಿತ ಮುಖಂಡರು ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನೀತಿಯನ್ನು ಹೊರಗೆಳೆಯಬೇಕು. ಪುಂಗಿ ಊದುವುದನ್ನು ಬಿಡಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯರನ್ನು ಬೆಂಬಲಿಸಿದರೆ ದಲಿತ ಮುಖಂಡರು ಸರ್ವನಾಶ ಆಗಲಿದ್ದೀರಿ ಎಂದು ಎಚ್ಚರಿಸಿದರು. ಡಾ. ಅಂಬೇಡ್ಕರರನ್ನು ಬದುಕಿದ್ದಾಗ ಗರಿಷ್ಠ ಪ್ರಮಾಣದಲ್ಲಿ ತುಳಿದ, ಅನ್ಯಾಯ ಮಾಡಿದ ಕಾಂಗ್ರೆಸ್ ಪಕ್ಷವನ್ನು ದಲಿತರು ಬೆಂಬಲಿಸಬಾರದು ಎಂದು ತಿಳಿಸಿದರು. ದಲಿತರು ಕಾಂಗ್ರೆಸ್‍ನಲ್ಲಿರುವುದು ಅಂಬೇಡ್ಕರರಿಗೆ ಮಾಡಿದ ದ್ರೋಹ ಎಂದು ನುಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಎಂ. ಶಂಕರಪ್ಪ ಅವರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!