ಹೊಸದಿಗಂತ ವರದಿ ಹುಬ್ಬಳ್ಳಿ:
ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ಕಾಲ ಕಳೆದಿರುವ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಮುಂದಾಲೋಚನೆ ಇಲ್ಲ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ಹಣಕಾಸಿನ ನಿರ್ವಹಣೆ ಸ್ಪಷ್ಟ ಪಡಿಸಬೇಕು, ಆಕಸ್ಮಾತ್ ಮಳೆಯಾಗದಿದ್ದರೆ ಎದುರಾಗುವ ಸಮಸ್ಯೆ ಪರಿಹಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಮಳೆ ಅಭಾವ, ಇನ್ನೊಂದು ಕಡೆ ಚಂಡಮಾರುತ ನಿಭಾಯಿಸಲು ಸರ್ಕಾರ ಇನ್ನೂ ಕ್ರಮಕೈಗೊಂಡಿಲ್ಲ. ಸರಿಯಾಗಿ ಮಳೆಯಾಗದಿರುವುದರಿಂದ ರಾಜ್ಯದ ಎಂಟು ಜಿಲ್ಲೆ ಅಷ್ಟೇ ಅಲ್ಲ ಎಲ್ಲ ಕಡೆಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ. ಎಲ್ಲ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸುವ ಮೊದಲು ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಪರಿಹಾರ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ನಗರ ಸಭೆ, ಪುರ ಸಭೆ ಹಾಗೂ ಪಾಲಿಕೆಯಲ್ಲಿ ನೀರು ಸರಬರಾಜು ಸರಿಯಾಗಿ ಮಾಡದ ಕಾರಣ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.
ಕೆಸಿಆರ್‌ಸಿಗೆ ಒಪ್ಪಿಗೆ ನೀಡಿದ್ದು ಕಾಂಗ್ರೆಸ್ :
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸ್ವತಂತ್ರವಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಅವರು ಕೆಸಿಆರ್‌ಸಿ ತನ್ನ ನಿರ್ಧಾರ ತಿಳಿಸಿತ್ತು. ಆದಕ್ಕೆ ನಾವು ಒಪ್ಪಿಕೊಂಡಿದ್ದಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಅದಕ್ಕೆ ಅನುಮತಿ ನೀಡಿದ್ದರಿಂದ ವಿದ್ಯುತ್ ದರ ಹೆಚ್ಚಾಗಿದೆ ಎಂದು ಸ್ಪಷ್ಟ ಪಡಿಸಿದರು.
ಅಧಿವೇಶನ ಮುಂಚೆ ವಿರೋಧ ಪಕ್ಷದ ನಾಯಕನ ಆಯ್ಕೆ:
ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆಗೆ ಸಂಬಧಿಸಿದಂತೆ ನಮ್ಮಲ್ಲಿ ಗೊಂದಲವಿಲ್ಲ. ಅಧಿವೇಶನ ಆರಂಭಕ್ಕೂ ಪೂರ್ವ ಆಯ್ಕೆ ನಡೆಯಲಿದೆ. ನಾನು ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿ ಅಲ್ಲ. ನಮ್ಮಲ್ಲಿ ಈ ಸ್ಥಾನಕ್ಕೆ ಅರ್ಹತೆ ಇರುವವರು ಬಹಳ ಜನ ಇದ್ದಾರೆ ಎಂದರು.