ಹೊಸದಿಗಂತ ವರದಿ ವಿಜಯಪುರ:
ಕಾಂಗ್ರೆಸ್ ಯಾರ ಮೇಲೂ ಅವಲಂಬಿತವಾಗಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ಮೇಲೆ ನಾವು ಅವಲಂಬಿತವಾಗಿಲ್ಲ. ನಮ್ಮ ಪಕ್ಷ ಜನರ ಮೇಲೆ ಅವಲಂಬಿತವಾಗಿದೆ. ಜನ ಆಶೀರ್ವಾದ ಮಾಡಿದರೆ ಆಯ್ಕೆಯಾಗಿ ಬರುತ್ತೇವೆ ಎಂದರು.
ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಭೇಟಿಗೆ ಬಿಜೆಪಿ ಟೀಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ವೇಣುಗೋಪಾಲ ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿ. ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ವೇಣುಗೋಪಾಲ ಅವರು ಬದ್ಧತೆ ಇರುವ ವ್ಯಕ್ತಿ. 5 ವರ್ಷ ನಾವು ಅವರನ್ನ ನೋಡಿದ್ದೇವೆ. ಸುಮ್ಮನೆ ಈ ರೀತಿ ಆಪಾದನೆ ಸರಿ ಅಲ್ಲ ಎಂದರು.
ಬಂಡಾಯ ಶಮನಕ್ಕೆ ವೇಣುಗೋಪಾಲ ಭೇಟಿ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಬಂಡಾಯ ಎಲ್ಲಿದೆ ? ಏನ್ ಬಂಡಾಯ ಇದೆ ಎಂದರು.
ಸತೀಶ್ ಜಾರಕಿಹೊಳಿ ಅವರ ಅಸಮಧಾನ ವಿಚಾರ ಕುರಿತು ಪ್ರತಿಕ್ರಿಯಿಸಿ, ನನಗೆ ಸತೀಶ್ ಜಾರಕಿಹೊಳಿ ಮೊನ್ನೆ ಭೇಟಿಯಾಗಿದ್ದರು. ದಸರಾಗೆ ಬರ್ತೀರಾ ಅಂತಾ ಕೇಳಿದ್ದರು. ನಾನು ಇಲ್ಲ ಎಂದೆ. ನೀವು ಕ್ರಿಯೆಟ್ ಮಾಡಿದ್ದೀರಿ. ಸ್ನೇಹಿತರು ಕೂಡಿ ಎಲ್ಲೂ ಪ್ರವಾಸ ಹೋಗಬಾರದಾ ? ಎಂದು ಪ್ರಶ್ನಿಸಿದರು.
ನಮ್ಮಲ್ಲಿ ಬಂಡಾಯ, ಗಿಂಡಾಯ ಏನಿಲ್ಲ. ಬಂಡಾಯವಿದ್ದರೆ ಮೊದಲು ನನಗೆ ಗೊತ್ತಾಗುತ್ತೆ. ಸತೀಶ್ ಜಾರಕಿಹೊಳಿ ನನಗೆ ಆತ್ಮೀಯರು. ಅಂತಹದ್ದು ಏನಿದ್ದರು ನನಗೆ ಹೇಳ್ತಾರೆ ಎಂದರು.
ಮತ್ತೆ 20 ಜನ ಶಾಸಕರ ಜೊತೆಗೆ ಹೋಗುವ, ಸತೀಶ ಜಾರಕಿಹೊಳಿ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ತಪ್ಪೇನಿದೆ, 20 ಯಾಕೆ ಎಲ್ಲರೂ ಹೋಗ್ತೇವೆ. 136 ಜನರು ಸೇರಿಯೇ ಹೋಗ್ತೀವಿ ಏನಾಗೋದಿದೆ ?. ಯಾವುದೇ ಅಸಮಧಾನ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮ ಸರ್ಕಾರ ಗಟ್ಟಿಮುಟ್ಟಾಗಿದೆ ಎಂದರು.