ಹೊಸದಿಗಂತ ವರದಿ ಹುಬ್ಬಳ್ಳಿ:
ಇಡೀ ದೇಶ ಹೊಸ ಶಿಕ್ಷಣ ನೀತಿ ಅನುಸರಿಸುತ್ತಿರುವಾಗ ಕರ್ನಾಟಕದಲ್ಲಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುವುದು ಸರಿಯಲ್ಲ. ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬಿರಲಿದ್ದು, ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಕೈಬಿಡಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯದರ್ಶಿ ಮಣಿಕಂಠ ಕಳಸ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಎನ್‌ಇಪಿ ಜಾರಿಗೊಳಿಸಿದೆ ಹಾಗೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು ಎಂಬ ಕಾರಣಕ್ಕೆ ರದ್ದು ಪಡಿಸಲು ಮುಂದಾಗಿದೆ. ಯಾವುದೇ ಸಾಧಕ ಬಾಧಕವಿಲ್ಲದೆ ಎಸ್‌ಇಪಿ ಜಾರಿಗೆ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಮೊದಲು ಎನ್‌ಇಪಿ ರದ್ದು ಪಡಿಸುತ್ತೇವೆ ಎಂದು ಹೇಳಿ ಬಳಿಕ ಸಮಿತಿ ರಚಿಸುವುದರ ಉದ್ದೇಶವೇನು? ರಚಿಸಿರುವ ಸಮಿತಿಯಲ್ಲಿ ಕರ್ನಾಟಕದವರು ಯಾರು ಇಲ್ಲ. ಇನ್ನೂ ವಿಜ್ಞಾನ, ಮನೋವಿಜ್ಞಾನ ಪರಿಣಿತರಿಲ್ಲದೆ ಸಮಿತಿ ರಚಿಸಿಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಎಬಿವಿಪಿ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಎನ್‌ಇಪಿ ಕುರಿತು ಜಾಗೃತಿ ಅಭಿಯಾನ ಮಾಡುತ್ತಿದೆ. ಸರ್ಕಾರ ಇದಕ್ಕೂ ಸ್ಪಂದಿಸದಿದ್ದರೆ ಬರುವ ಅವೇಶನ ಸಂದರ್ಭದಲ್ಲಿ ವಿಧಾನ ಸೌಧ ಹಾಗೂ ಸಚಿವರಿಗೆ ಘೇರಾವ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಬಿವಿಪಿಯ ಧಾರವಾಡ ವಿಭಾಗ ಸಂಚಾಲಕ ಅರುಣ ಅಮರಗೋಳ, ರಾಜ್ಯ ಸಹ ಕಾರ್ಯದರ್ಶಿ ಶಿವಾನಿ ಶೆಟ್ಟಿ ಇದ್ದರು.