ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ, ಲೋಕಸಭೆಯ ವಿರೋಧ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಅವರ ಬ್ರಿಟಿಷ್ ಪತ್ನಿ ಪಾಕ್ ಪ್ರಜೆ ಅಲಿ ತೌಕೀರ್ ಶೇಖ್ ಗೆ ನಂಟಿ ಇದ್ದು, ಇಲ್ಲಿಯವರೆಗೆ 18 ಬಾರಿ ಭಾರತಕ್ಕೆ ಭೇಟಿ ನೀಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭ ಈ ವಿಷಯ ತಿಳಿಸಿದ ಶರ್ಮಾ, ಪ್ರಕರಣದ ಆರಂಭಿಕ ಮಾಹಿತಿಯು ಕಾಂಗ್ರೆಸ್‌ಗೆ ‘ಅತ್ಯಂತ ಮಾರಕ’ ಮತ್ತು ಅಸ್ಸಾಂನ ರಾಜಕೀಯದ ಮೇಲೆ ‘ದೊಡ್ಡ ಪರಿಣಾಮ’ ಬೀರಲಿದೆ ಎಂದು ಹೇಳಿದ್ದಾರೆ.
ಅಲಿ ತೌಕೀರ್ ಶೇಖ್ ಭಾರತಕ್ಕೆ 18 ಬಾರಿ ಭೇಟಿ ನೀಡಿದ್ದರು ಎಂದು ಪ್ರಕರಣದ ಕುರಿತು ಅಸ್ಸಾಂ ಪೊಲೀಸ್ ಎಸ್‌ಐಟಿ ಪತ್ತೆ ಮಾಡಿದೆ. ಅವರನ್ನು ಯಾರು ಆಹ್ವಾನಿಸಿ, ಆತಿಥ್ಯ ನೀಡಿದ್ದರು ಎಂಬುದು ಈಗ ತಿಳಿಯಬೇಕಾಗಿದೆ. ಈ ಸತ್ಯಗಳು ಕಾಂಗ್ರೆಸ್ ಪಕ್ಷಕ್ಕೆ ಬಹಳ ಮಾರಕವಾಗಲಿವೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದರು.
ಜವಾಬ್ದಾರಿಯುತ ವ್ಯಕ್ತಿಯಾಗಿ ವಿಧಾನಸಭೆಯೊಳಗೆ ನಿಂತು ಹೇಳುತ್ತಿದ್ದೇನೆ, ಶೇಖ್ ಜಾಲವನ್ನು ಬೇಧಿಸುತ್ತೇವೆ ಎಂದು ಅಸ್ಸಾಂ ವಿಧಾನಸಭೆಗೆ ಭರವಸೆ ನೀಡುತ್ತೇನೆ. ಮೂರು ತಿಂಗಳ ಕಾಲಾವಕಾಶ ನೀಡಿ, ಆಗಸ್ಟ್ ತಿಂಗಳ ಅಧಿವೇಶನದಲ್ಲಿ ಎಲ್ಲವನ್ನೂ ತಿಳಿಸುತ್ತೇವೆ ಎಂದು ಅವರು ತಿಳಿಸಿದರು.
ಶೇಖ್ ಅವರ ಟ್ವೀಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಚಟುವಟಿಕೆಗಳು ಅಸ್ಸಾಂ ವಲಸಿಗರ ಮೇಲೆ ಇವೆ. ಇದು ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನವಾಗಿದೆಎಂದು ಅವರು ಆರೋಪಿಸಿದರು.
ಗೊಗೊಯ್ ಅವರ ಪತ್ನಿ ಎಲಿಜಬೆತ್ ಕೋಲ್ಬರ್ನ್ ಪಾಕಿಸ್ತಾನದ ಬೇಹುಗಾರಿಕೆ ISI ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಾಗೂ ಬಿಜೆಪಿ ವಾಗ್ದಾಳಿ ನಡೆಸುತ್ತಿವೆ. ಅಸ್ಸಾಂ ಮತ್ತು ಭಾರತದ ಅಂತರಿಕ ವ್ಯವಹಾರ ಕುರಿತು ಶೇಖ್ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಟ್ವೀಟ್ ಕುರಿತ ತನಿಖೆಗೆ ಅಸ್ಸಾಂ ಪೊಲೀಸರು ಸೋಮವಾರ ವಿಶೇಷ ತನಿಖಾ ತಂಡ ರಚಿಸಿದೆ.