ಪ್ರಧಾನಿ ಮೋದಿ ಮುಂದೆ 6 ಪ್ರಶ್ನೆಗಳನ್ನು ಇಟ್ಟ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಚುನಾವಣೆ ಸಮೀಪಿಸಿದಾಗ ಮಾತ್ರ ಕರ್ನಾಟಕ (Karnataka) ನೆನಪಾಗುತ್ತದೆ ಎಂದು ಸುರ್ಜೇವಾಲ ಟೀಕಿಸಿದ್ದಾರೆ.

ಇದೇ ವೇಳೆ ಮೋದಿ ಅವರಿಗೆ ಆರು ಪ್ರಶ್ನೆಗಳನ್ನು ಕೇಳಿದ ಅವರು, ‘ಎಲ್ಲಾದರೂ ಇರು ಹೇಗಾದರೂ ಇರು ಚುನಾವಣೆ ಬಂದಾಗ ಮಾತ್ರ ಕರ್ನಾಟಕದಲ್ಲೇ ಇರು’ ಎಂಬ ನೀತಿ ಪಾಲಿಸುತ್ತಿರುವ ಮೋದಿ ಅವರಿಗೆ 6 ಪ್ರಶ್ನೆಗಳನ್ನು ಮುಂದಿಡುತ್ತಿದ್ದೇನೆ.

ಭಾರತೀಯ ಜನತಾ ಪಕ್ಷ ಕರ್ನಾಟಕದ ಉದ್ದಗಲಕ್ಕೂ ‘ಬಿಜೆಪಿಯೇ ಭರವಸೆ’ ಅನ್ನೋ ಅಭಿಯಾನ ನಡೆಸುತ್ತಿದ್ದು 40% ಸರ್ಕಾರ ತನ್ನ ಅಕ್ರಮ ಗಳಿಕೆಯ ಹಣದಲ್ಲಿ ಎಲ್ಲಾ ರಸ್ತೆಗಳ ಗೋಡೆಗಳ ಮೇಲೆ ಪೋಸ್ಟರ್‌ ಅಂಟಿಸುವ ಮೂಲಕ ಚುನಾವಣೆ ಎದುರಿಸಲು ಮುಂದಾಗಿದೆ. ಆದರೆ ಕಳೆದ ಬಾರಿ ನಿಮ್ಮ ನೇತೃತ್ವದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ 600 ಭರವಸೆಗಳ ಪೈಕಿ ಶೇ 10 ಭರವಸೆಗಳನ್ನೂ ನಿಮ್ಮ ಸರಕಾರದಿಂದ ಪೂರೈಸಲಾಗಿಲ್ಲ ಯಾಕೆ? ಈ ಬಗ್ಗೆ ಸರ್ಕಾರದ ಹಣದಲ್ಲಿ ನೀವು ನಡೆಸುತ್ತಿರುವ ಪ್ರಚಾರ ಸಭೆಯಲ್ಲಿಯಾದರೂ ಜನರಿಗೆ ಉತ್ತರ ನೀಡಬಲ್ಲಿರಾ ಎಂದು ಪ್ರಶ್ನಿಸಿದ್ದಾರೆ.

‘ರೋಡ್‌ ಶೋ ’ಗಾಗಿ ಇಂದು ನಡೆಯಬೇಕಿದ್ದ ಪ್ರಥಮ ಪಿಯುಸಿ ಪರೀಕ್ಷೆಯನ್ನು ಬೆಳಗಾವಿಯಲ್ಲಿ ರದ್ದು ಮಾಡಲಾಗಿದೆ. ಈ ಬಗ್ಗೆ ನೀವು ಉತ್ತರಿಸುವಿರಾ?

ಕರ್ನಾಟಕದ 13,000 ಅನುದಾನ ರಹಿತ ಶಾಲೆಗಳ ಒಕ್ಕೂಟವಾದ ‘ರುಪ್ಸಾ’ ರಾಜ್ಯದ ಬಿಜೆಪಿ ಸರ್ಕಾರದಲ್ಲಿ 40% ಲಂಚ ನೀಡದೆ ಯಾವುದೇ ಸೇವೆ ಪಡೆಯಲು ಸಾಧ್ಯವಿಲ್ಲ ಎಂದು ತಮಗೆ ಪತ್ರ ಬರೆದು ಆರೋಪ ಮಾಡಿದ್ದರು. ಇದಕ್ಕೆ ತಾವು ಉತ್ತರವೇ ಕೊಟ್ಟಿಲ್ಲ ಯಾಕೆ? ‘ಪರೀಕ್ಷಾ ಪೇ ಚರ್ಚೆ’ ನಡೆಸುವ ತಾವು ಶಿಕ್ಷಣದ ಬಗ್ಗೆ ಚರ್ಚೆಗೆ ಯಾವಾಗ ಬರ್ತೀರಾ ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.

ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಕರ್ನಾಟಕದಲ್ಲಿ ಸುಮಾರು ಎರಡೂವರೆ ಲಕ್ಷ ಸರ್ಕಾರಿ ಉದ್ಯೋಗ ಮತ್ತು ಸುಮಾರು ಏಳುವರೆ ಲಕ್ಷ ಖಾಸಗಿ ಉದ್ಯೋಗಕ್ಕೆ ಅವಕಾಶವಿದ್ದು, ರಾಜ್ಯದ ಬಿಜೆಪಿ ಸರ್ಕಾರ ಯುವಜನರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿರುತ್ತದೆ.ನಿಮ್ಮ ಬಿಜೆಪಿ ಶಾಸಕರು ಹಾಗೂ ಮಂತ್ರಿಗಳು ಸರ್ಕಾರದ ಹುದ್ದೆಗಳನ್ನು ಲಕ್ಷ-ಕೋಟಿಗಟ್ಟಲೆ ಹಣಕ್ಕೆ ಮಾರಾಟಕ್ಕೆ ಇಟ್ಟುಬಿಟ್ಟಿದ್ದಾರೆ! ನಿಮ್ಮದೇ ಪಕ್ಷದ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಶಾಸಕರೊಬ್ಬರು ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳ ಪುತ್ರ ಪಿಎಸ್​ಐ ನೇಮಕಾತಿ ಹಗರಣದ ನೇರ ರೂವಾರಿ ಎಂದು ಆರೋಪಿಸಿದ್ದರು. ಅದರ ಬಗ್ಗೆನೂ ನಿಮ್ಮ ಭಾಷಣಕಾರರಿಗೆ ಹೇಳಿ ಒಂದು ಉತ್ತರ ಬರೆಸಿ, ಅದನ್ನು ಓದಿ ಹೇಳಿ ನೋಡೋಣ! .

ಶಿವಮೊಗ್ಗದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಲಕ್ಷಾಂತರ ಜನರ ಪಾಲಿಗೆ ಉದ್ಯೋಗ ಒದಗಿಸಿದ್ದ ದೇಶದ ಮಹತ್ತರ ಕಾರ್ಖಾನೆಯಾಗಿತ್ತು. ಈ ಕಾರ್ಖಾನೆಗೆ ಯುಪಿಐ ಸರ್ಕಾರ 2013ರಲ್ಲಿಯೇ ಬಳ್ಳಾರಿಯಲ್ಲಿ 380 ಎಕರೆ ಗಣಿ ಪ್ರದೇಶವನ್ನು ಒದಗಿಸಿತ್ತು. ಆದರೆ ನಿಮ್ಮ ಸರ್ಕಾರ ಆ ಗಣಿ ಪ್ರದೇಶದ ಉಪಯೋಗವನ್ನೇ ಮಾಡದೇ, ಈಗ ಈ ಕಾರ್ಖಾನೆಗೆ ಶಾಶ್ವತವಾಗಿ ಬೀಗ ಹಾಕಿದ್ದು ಯಾಕೆ ಅಂತ ಶಿವಮೊಗ್ಗದ ಜನರಿಗೆ ಉತ್ತರಿಸಿಲ್ಲ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಕಳೆದ ಚುನಾವಣೆಯ ವೇಳೆ ದೇಶದ ಗೃಹ ಮಂತ್ರಿ ಅಮಿತ್‌ ಶಾ, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಶಿವಮೊಗ್ಗ ಜಿಲ್ಲೆಯಲ್ಲಿ 500 ಕೋಟಿ ರೂ. ವೆಚ್ಚದ ಅಡಿಕೆ ಸಂಶೋಧನಾ ಕೇಂದ್ರ ರಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಅದಕ್ಕೆ 5 ಪೈಸೆ ಸಹ ನೀಡಿಲ್ಲ ಏಕೆ? ಆತ್ಮನಿರ್ಭರ್‌ ಭಾರತದ ಹೆಸರಲ್ಲಿ ಪ್ರಚಾರ ಪಡೆಯುವ ತಾವು ನಮ್ಮ ದೇಶದಲ್ಲಿ ಬೆಳೆಸುವ ಉತ್ಕೃಷ್ಟ ದರ್ಜೆಯ ಅಡಿಕೆಗೆ ಪ್ರೋತ್ಸಾಹ ನೀಡದೇ, ಹೊರದೇಶದಿಂದ ಅಮದಾಗುವ ಅಡಿಕೆ ಮೇಲಿದ್ದ ಆಮದು ಸುಂಕವನ್ನು 110% ನಿಂದ ಕೇವಲ 10% ಇಳಿಸಿ ದೇಶೀ ಅಡಿಕೆಯ ಮಾರುಕಟ್ಟೆಯನ್ನು ಭಸ್ಮ ಮಾಡಿದ್ದು ಏಕೆ? ಇಡೀ ಮಲೆನಾಡು ಪ್ರದೇಶದಲ್ಲಿ ಎಲೆ ಚುಕ್ಕೆ ರೋಗದಿಂದ ಮುಂದಿನ ಮಳೆಗಾಲದ ಒಳಗೆ ಇಡೀ ಅಡಿಕೆ ಬೆಲೆ ಸರ್ವನಾಶಗುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ, ಆದರೂ ಈ ಎಲೆ ಚುಕ್ಕೆ ರೋಗಕ್ಕೆ ನಿಮ್ಮ ಡಬಲ್‌ ಇಂಜಿನ್‌ ಸರ್ಕಾರ ಔಷದ ಕಂಡು ಹಿಡಿಯಲು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಏಕೆ ಎಂದು ಅವರು ಮೋದಿಯವರನ್ನು ಪ್ರಶ್ನಸಿದ್ದಾರೆ.

ಕರ್ನಾಟಕ – ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಪದೇ ಪದೇ ರಾಜ್ಯಗಳ ಮಧ್ಯೆ ಮಹಾರಾಷ್ಟ್ರದ ಬಿಜೆಪಿ ಮಂತ್ರಿಗಳು ಹಾಗೂ ಶಾಸಕರು ಕಂದಕ ಸೃಷ್ಟಿಸುತ್ತಿದ್ದಾರೆ. ಕರ್ನಾಟಕದ ಅಸ್ಮಿತೆಗೆ ಧಕ್ಕೆ ತಂದು, ನಮ್ಮ ನಾಡಿನಲ್ಲಿ ಶಾಂತಿ ಭಂಗಪಡಿಸಲು ಯತ್ನಿಸುತ್ತಿರುವವವರಿಗೆ, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ – ಇಲ್ಲಿ ಯಾರೂ ಅನಾವಶ್ಯಕವಾಗಿ ಹಾಗೂ ಉದ್ದೇಶಪೂರ್ವಕವಾಗಿ ಗಡಿ ವಿಚಾರದಲ್ಲಿ ರಾಜಕೀಯ ಮಾಡಬಾರದು’ ಎಂದು ನೀವು ಘೋಷಿಸಿ, ಮಹಾರಾಷ್ಟ್ರದ ಬಿಜೆಪಿ ಶಾಸಕರಿಗೆ ಪಾಠ ಹೇಳಬಲ್ಲಿರಾ? ಎಂದು ಸುರ್ಜೇವಾಲ ಕೇಳಿದ್ದಾರೆ.

ಚುನಾವಣಾ ಸಮಯದಲ್ಲಿ ಕರ್ನಾಟಕದ ಸ್ಥಳೀಯ ನಾಯಕತ್ವದ ಕೊರತೆ ಮತ್ತು ವೈಫಲ್ಯವನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿರವರು, ಪದೇ ಪದೇ ಕರ್ನಾಟಕಕ್ಕೆ ಭೇಟಿ ನೀಡಿ ಸುಳ್ಳು ಮಾಹಿತಿಗಳ ಮುಖಾಂತರ ಜನಸಾಮಾನ್ಯರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. ಇಲ್ಲಿಯವರೆಗೆ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳಿಗೆ, ಭ್ರಷ್ಟಾಚಾರಗಳಿಗೆ, ಆಡಳಿತ ಯಂತ್ರದ ಕುಸಿತಕ್ಕೆ, ಉದ್ಯೋಗದ ಸಮಸ್ಯೆಗೆ, ಬೆಲೆ ಏರಿಕೆಗೆ ಮತ್ತು ಹಗರಣಗಳಿಗೆ ಉತ್ತರ ಕೊಡದ ಪ್ರಧಾನ ಮಂತ್ರಿ ಮೋದಿಯವರು, ಜನರ ಪ್ರಶ್ನೆಗಳಿಗೆ ಉತ್ತರಿಸದೆ ಪಲಾಯನ ಮಾಡುತ್ತಿದ್ದಾರೆ. ಆದ್ದರಿಂದ ಈ ಮೇಲಿನ ಪ್ರಶ್ನೆಗಳಿಗೆ ಪ್ರಧಾನ ಮಂತ್ರಿಯವರು ಉತ್ತರಿಸಲೇಬೇಕು ಎಂದು ಕಾಂಗ್ರೆಸ್‌ ಪಕ್ಷ ಈ ಮೂಲಕ ಒತ್ತಾಯಿಸುತ್ತದೆ ಎಂದು ಸರ್ಜೇವಾಲ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!