ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಅವರ ಸೊಸೆ ಅರ್ಚನಾ ಪಾಟೀಲ್ ಚಾಕುರ್ಕರ್ (Archana Patil) ಇಂದು (ಶನಿವಾರ) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಅರ್ಚನಾ ಪಾಟೀಲ್ ಉದಗೀರ್‌ನಲ್ಲಿರುವ ಲೈಫ್‌ಕೇರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದು, ಅವರ ಪತಿ ಶೈಲೇಶ್ ಪಾಟೀಲ್ ಚಂದೂರಕರ್ ಕಾಂಗ್ರೆಸ್‌ನ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ನಾನು ಬಿಜೆಪಿಗೆ ಸೇರಿದ್ದೇನೆ. ಪ್ರಧಾನಿ ಮೋದಿ ತಂದ ನಾರಿ ಶಕ್ತಿ ವಂದನ್ ಅಧಿನಿಯಮದಿಂದ ನಾನು ಹೆಚ್ಚು ಪ್ರಭಾವಿತಳಾಗಿದ್ದೆ. ಇದು ಮಹಿಳೆಯರಿಗೆ ಸಮಾನ ಅವಕಾಶವನ್ನು ನೀಡುತ್ತದೆ ಎಂದು ಅರ್ಚನಾ ಪಾಟೀಲ್ ಹೇಳಿದರು.
ನಾನು ಲಾತೂರ್‌ನಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ನಾನು ಬಿಜೆಪಿಯೊಂದಿಗೆ ತಳಮಟ್ಟದಲ್ಲಿ ಕೆಲಸ ಮಾಡುತ್ತೇನೆ. ನಾನು ಅಧಿಕೃತವಾಗಿ ಕಾಂಗ್ರೆಸ್‌ನಲ್ಲಿ ಇರಲಿಲ್ಲ. ನಾನು ಬಿಜೆಪಿಗೆ ಸೇರಿದ್ದೇನೆ. ಏಕೆಂದರೆ ಅದರ ಸಿದ್ಧಾಂತವು ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ದಕ್ಷಿಣ ಮುಂಬೈನಲ್ಲಿರುವ ಅವರ ಅಧಿಕೃತ ನಿವಾಸ ‘ಸಾಗರ್’ನಲ್ಲಿ ಶುಕ್ರವಾರ ಭೇಟಿಯಾಗಿದ್ದರು. ಶಿವರಾಜ್ ಪಾಟೀಲ್ ಅವರ ಆಪ್ತ, ಮಾಜಿ ರಾಜ್ಯ ಸಚಿವ ಬಸವರಾಜ ಮುರುಮ್ಕರ್ ಅವರೊಂದಿಗೆ ಅರ್ಚನಾ ಪಾಟೀಲ್ ಸೋಮವಾರ ಬಿಜೆಪಿ ಸೇರಲು ಯೋಜಿಸಿದ್ದರು. ಆದರೆ ಮಗಳ ಮದುವೆಯ ಕಾರಣ ಯೋಜನೆಯನ್ನು ಬಸವರಾಜ್ ಮುಂದೂಡಿದ್ದರು.
ಶಿವರಾಜ್ ಪಾಟೀಲ್ ಅವರು 2004 ಮತ್ತು 2008 ರ ಅವಧಿಯಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿದ್ದರು.