ಕೈ ನಾಯಕರು ಜನರ ದಾರಿ ತಪ್ಪಿಸುವುದನ್ನು ಬಿಟ್ಟು ವಿಚಾರಣೆ ಎದುರಿಸಲಿ: ಛಲವಾದಿ ನಾರಾಯಣಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ʼಕಾಂಗ್ರೆಸ್ ಮುಖಂಡರನ್ನು ದೇಶದಲ್ಲಿ ಯಾರೂ ಪ್ರಶ್ನಿಸುವಂತಿಲ್ಲ, ಅವರ ಬಗ್ಗೆ ಮಾತನಾಡಿದರೆ ಹೋರಾಟಕ್ಕೆ ಬೀದಿಗಿಳಿದು ಬಿಡುತ್ತಾರೆ. ಹಾಗಿದ್ದರೆ ಕಾಂಗ್ರೆಸ್ಸಿಗರು ಪ್ರಶ್ನಾತೀತರೇ? ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ. ಆಪಾದನೆ ಬಂದಾಗ ವಿಚಾರಣೆಗೆ ಹಾಜರಾಗಿ ಆರೋಪಮುಕ್ತ ಆಗಬೇಕು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಬಿಜೆಪಿ ಮೇಲೆ ಗೂಬೆ ಕೂರಿಸಿ ಜನರ ದಾರಿ ತಪ್ಪಿಸುವ ಕೆಲಸ ಬಿಟ್ಟು ವಿಚಾರಣೆ ಎದುರಿಸಿʼ ಎಂದು ವಿಪ ಸದಸ್ಯ ಹಾಗೂ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ತಾವು ಬದುಕಿದ್ದೀವಿ ಎಂದು ತೋರಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ. ಇ.ಡಿ. ವಿಚಾರಣೆಯಲ್ಲಿ ಸತ್ಯಾಂಶ ಇದೆ ಎಂದು  ಅವರದ್ದೇ ಪಕ್ಷದ ರಮೇಶ್‍ ಕುಮಾರ್ ಅವರೇ ಹೇಳಿದ್ದಾರೆ. ಕಾರುಗಳಿಗೆ ಬೆಂಕಿ ಹಚ್ಚುವುದು ಸಂವಿಧಾನ ರಕ್ಷಣೆಯೇ? ದೇಶ  ಕಾಂಗ್ರೆಸ್ ಮುಕ್ತವಾದರೆ ಭ್ರಷ್ಟಾಚಾರದಿಂದಲೂ ಮುಕ್ತವಾಗುತ್ತದೆ ಎಂದರು.
ಈಗಿನ ಕಾಂಗ್ರೆಸ್‌ ಸ್ವಾತಂತ್ರ್ಯಕ್ಕೆ ಹೋರಾಡಿಲ್ಲ, ಹೋರಾಡಿದ್ದು ಹಳೆಯ ಕಾಂಗ್ರೆಸ್‌ ಮಾತ್ರ. ವಿದೇಶಿ ಮಹಿಳೆ ಸೋನಿಯಾರವರು ದೇಶಕ್ಕೆ ಯಾವ ತ್ಯಾಗ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ,  ಸ್ವತಂತ್ರ ಸಂಸ್ಥೆಯಾದ ಇ.ಡಿ.ಯ ಅಧಿಕಾರಿಗಳು ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿಗಳನ್ನು ವಿಚಾರಿಸುವುದು ಸಹಜ ಪ್ರಕ್ರಿಯೆ. ಆದರೆ, ಸೋನಿಯಾ ಗಾಂಧಿ ಅವರನ್ನು ಇ.ಡಿ. ವಿಚಾರಣೆಗೆ ಕರೆದಿದೆ ಎಂದು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿ ಹುಯಿಲೆಬ್ಬಿಸುತ್ತಿದೆ. ಕಾಂಗ್ರೆಸ್ ಪಕ್ಷದವರಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರರು ಬರೆದ ಸಂವಿಧಾನದಲ್ಲಿ ವಿಶ್ವಾಸ ಇಲ್ಲವೇ ಎಂದು ಪ್ರಶ್ನಿಸಿದರು.  ಕಾಂಗ್ರೆಸ್ಸಿಗರಿಗೆ ನೈತಿಕತೆ ಇದ್ದರೆ, ಪ್ರಾಮಾಣಿಕತೆ, ಸತ್ಯಾಂಶ ಇದ್ದರೆ ಆ ಕೇಸನ್ನು ಎದುರಿಸಿ ಆರೋಪಮುಕ್ತರಾಗಿ ಹೊರಬರಲಿ ಎಂದು ಸವಾಲೆಸೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!