ಕಾಂಗ್ರೆಸ್’ನದ್ದು ದೇಶ ವಿಭಜನೆಯ ಮನಸ್ಥಿತಿ: ಕೋಟ ಶ್ರೀನಿವಾಸ ಪೂಜಾರಿ

ಹೊಸದಿಗಂತ ವರದಿ, ಮಡಿಕೇರಿ:

ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ದೇಶ ವಿಭಜನೆಯ ಕುರಿತಾಗಿ ಮಾತನಾಡಿದ್ದು, ಅದು ಕೇವಲ ಅವರೊಬ್ಬರ ಮಾತಲ್ಲ, ಬದಲಾಗಿ ಒಟ್ಟು ಕಾಂಗ್ರೆಸ್ ಮನಸ್ಥಿತಿಯದ್ದೆಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ದೃಢವಾಗಿ ನುಡಿದರು.

ನಗರದ ಕಾವೇರಿ ಹಾಲ್‌ನಲ್ಲಿ ಆಯೋಜಿತ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಮತ್ತು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ರಾಷ್ಟ್ರವನ್ನು ಒಂದಾಗಿ ಬೆಸೆಯುವ ಬಿಜೆಪಿಯ ಉದಾತ್ತ ಚಿಂತನೆ ಮತ್ತು ವಿಭಜನೆಯ ಕಾಂಗ್ರೆಸ್ ಚಿಂತನೆಗಳು ಮುಂಬರುವ ಚುನಾವಣೆಯಲ್ಲಿ ಮುಖಾಮುಖಿಯಾಗಲಿದೆಯೆಂದು ಹೇಳಿದರು.

ಮಂಡ್ಯದ ಖಾಸಗಿ ಜಾಗದಲ್ಲಿ ಹನುಮ ಧ್ವಜ ಹಾರಿಸಿದ್ದನ್ನು ತೆರವುಗೊಳಿಸಿರುವ ಘಟನೆಯನ್ನು ಉಲ್ಲೇಖಿಸಿದ ಶ್ರೀನಿವಾಸ ಪೂಜಾರಿ ಅವರು, ಮುಂಬರುವ ಚುನಾವಣೆ ಹನುಮ ಭಕ್ತರ ಮತ್ತು ಟಿಪ್ಪು ಭಕ್ತರ ನಡುವಿನದ್ದಾಗಿರುತ್ತದೆಂದು ಅಭಿಪ್ರಾಯಿಸಿದರು.

‘ಇದು ಬದಲಾದ ಭಾರತ: ಜಮ್ಮು ಕಾಶ್ಮೀರದದಲ್ಲಿದ್ದ 370ನೇ ವಿಧಿಯನ್ನು ರದ್ದುಗೊಳಿಸಬೇಕೆನ್ನುವ ಬೇಡಿಕೆ ಅಂದಿನ ಜನಸಂಘದ ನಾಯಕರದ್ದಾಗಿತ್ತಾದರೂ, ಅದು ಈಡೇರಬಹುದೆನ್ನುವ ಭಾವನೆಗಳಿರಲಿಲ್ಲ. ಅದೇ ರೀತಿ ತೊಂಭತ್ತರ ದಶಕದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರು ರಾಮನ ರಥ ಯಾತ್ರೆಯನ್ನು ಮಾಡುವ ಹಂತದಲ್ಲಿ ಮುಂದೊಮ್ಮೆ ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲ ತಲೆ ಎತ್ತಬಹುದೆಂದು ಊಹಿಸಿರಲಿಲ್ಲ. ಅಂತಹ ಪರಿಸ್ಥಿತಿಗಳಿಂದ ಹೊರ ಬಂದು ಭಾರತೀಯ ಜನತಾ ಪಾರ್ಟಿ ಅಗಾಧವಾಗಿ ಬೆಳೆದು ನಿಂತಿದ್ದು, ಶ್ರೀಸಾಮಾನ್ಯರನ್ನು ತಲುಪಿದ ಪಕ್ಷವಾಗಿದೆ. ಹಿರಿಯರ ಪರಿಶ್ರಮಗಳಿಂದ ಬೆಳೆದು ನಿಂತ ಪಕ್ಷದ ಮೂಲಕ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಗಳಾದ ಬಳಿಕ ಸಾಧಿಸಿದ ಅಭಿವೃದ್ಧಿಗಳು ಇಂದು ಇಡೀ ಜಗತ್ತೆ ದಿಗ್ಭ್ರಮೆಗೊಳ್ಳುವ ರೀತಿಯಲ್ಲಿ ಭಾರತ ಬೆಳೆದಿದೆ. ‘ಇದು ಬದಲಾದ ಭಾರತ’ವೆಂದು ಸಂತಸ ವ್ಯಕ್ತಪಡಿಸಿದರು.

ಕನಸು ನನಸಾಗಿದೆ: ರಾಮ ಮಂದಿರಕ್ಕೆ ದಶಕಗಳ ಹಿಂದೆ ಸಂಗ್ರಹಿಸಿದ ಇಟ್ಟಿಗೆ, ಕಬ್ಬಿಣದಿಂದ ಮಾಡಿದ್ದೇನು ಎನ್ನುವ ಪ್ರಶ್ನೆಗಳು ಕೇಳಿ ಬರುತಿತ್ತು. ಪ್ರಸ್ತುತ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಮ್ಮ ಬದುಕಿನ ಅವಧಿಯಲ್ಲೇ ನಡೆದಿರುವ ಹೆಮ್ಮೆ ಸಂತಸ ತಮ್ಮದಾಗಿದ್ದು, ಹಿಂದೆ ಕಂಡಿದ್ದ ಕನಸು ಇಂದು ನನಸಾಗಿದೆಯೆಂದು ನುಡಿದರು.

ಜಮ್ಮು ಕಾಶ್ಮೀರದ ಲಾಲ್ ಚೌಕ್‌ನಲ್ಲಿ ‘ನೀವು ತಾಯಿಯ ಎದೆ ಹಾಲು ಕುಡಿದವರಾಗಿದ್ದರೆ ತ್ರಿವರ್ಣ ಧ್ವಜ ಹಾರಿಸಿ’ ಎನ್ನುವ ಭಯೋತ್ಪಾಕರ ಸವಾಲುಗಳನ್ನು ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಯಶಸ್ವಿಯಾಗಿ ಮೆಟ್ಟಿ ನಿಂತು, ಅಲ್ಲಿನ 370ನೇ ವಿಶೇಷ ಸ್ಥಾನಮಾನಗಳನ್ನು ತೆರವುಗೊಳಿಸಿರುವುದಲ್ಲದೆ, ಅಂದಿನ ಭಯೋತ್ಪಾದಕರ ಸವಾಲಿಗೆ ಉತ್ತರವೆಂಬಂತೆ ಅಲ್ಲಿನ ಕಚೇರಿಗಳಲ್ಲಿ ಬೆಳಗ್ಗೆ ಎಂಟು ಗಂಟೆಗೆ ತ್ರಿವರ್ಣ ಧ್ವಜ ಹಾರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಅಫ್ಘಾನಿಸ್ತಾನ ಭಯೋತ್ಪಾಕರ ಹಿಡಿತಕ್ಕೆ ಸಿಕ್ಕಿದ ಹಂತದಲ್ಲಿ ನೆಲೆ ಕಳೆದುಕೊಂಡ ಅಲ್ಲಿನ ಭಾರತೀಯ ಮೂಲದವರಿಗೆ ‘ಪೌರತ್ವ ತಿದ್ದುಪಡಿ’ ಕಾಯ್ದೆಯ ಮೂಲಕ ಭಾರತದಲ್ಲಿ ನೆಲೆಯೊದಗಿಸಲು ಸಾಧ್ಯವಾಗಿದೆ. ಇದು ಬದಲಾದ ಭಾರತವೆಂದು ಶ್ರೀನಿವಾಸ ಪೂಜಾರಿ ಒತ್ತಿ ನುಡಿದರು.

ಬರ ಪರಿಹಾರ ನೀವೆಷ್ಟು ಕೊಟ್ಟಿದ್ದೀರಿ?: ರಾಜ್ಯ ಬರದ ಸಂಕಷ್ಟದಲ್ಲಿ ಸಿಲುಕಿರುವ ಹಂತದಲ್ಲಿ ಕೇಂದ್ರದತ್ತ ಬೊಟ್ಟು ಮಾಡಿ ಪರಿಹಾರ ನೀಡಿಲ್ಲವೆಂದು ಆರೋಪಿಸುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ಎಷ್ಟು ಒದಗಿಸಿದ್ದಾರೆಂದು ಪ್ರಶ್ನಿಸಿ, ಇದೀಗ ಬಿಡುಗಡೆ ಮಾಡಿರುವ 350 ಕೊಟಿ ರೂ. ಪರಿಹಾರದಲ್ಲಿ ಶೇ.75 ಭಾಗ ಕೇಂದ್ರದ್ದೇ ಆಗಿದೆ. ಬರದ ಪರಿಸ್ಥಿತಿಗಳ ನಡುವೆ ರಾಜ್ಯ ಸರ್ಕಾರ ಕನಿಷ್ಟ ಗೋ ಶಾಲೆಗಳನ್ನು ಸಮರ್ಪಕವಾಗಿ ಸಿದ್ಧಪಡಿಸಿಲ್ಲವೆಂದು ಟೀಕಿಸಿದ ಅವರು, ಕಾಂಗ್ರೆಸ್‌ನ ಕಳೆದ ಎಂಟು ತಿಂಗಳ ಅಧಿಕಾರದ ಅವಧಿಯಲ್ಲಿ 8 ಮೀಟರ್ ರಸ್ತೆ ಕೂಡಾ ನಿರ್ಮಿಸಿಲ್ಲವೆಂದು ಗೇಲಿ ಮಾಡಿದರು.

ಚುನಾವಣೆ ಬಳಿಕ ಗ್ಯಾರಂಟಿ ಇಲ್ಲ: ಇತ್ತೀಚೆಗೆ ಮಾಗಡಿ ಶಾಸಕರು ಮುಂಬರುವ ಚುಣಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸದಿದ್ದರೆ ಗ್ಯಾರಂಟಿ ರದ್ದುಮಾಡಿವುದಾಗಿ ಕಾಂಗ್ರೆಸ್‌ನ ಆಂತರ್ಯದ ಮಾತುಗಳನ್ನಾಡಿದ್ದಾರೆ. ಇದು ನಿಜವೂ ಹೌದು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಕಾಂಗ್ರೆಸ್‌ಗೂ ಖಚಿತವಾಗಿದೆಯೆಂದು ತಿಳಿಸಿದ ಅವರು, ಸ್ವಾಭಿಮಾನದ ಭಾರತ ನಿರ್ಮಾಣಕ್ಕೆ ಬಿಜೆಪಿಯ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಸ್ವಾತಂತ್ರ್ಯಾನಂತರದ ಅವಧಿಯ ಸುಮಾರು 56 ವರ್ಷಗಳ ಕಾಲ ಈ ದೇಶದಲ್ಲಿ ಕಾಂಗ್ರೆಸ್ ಆಡಳಿತವಿತ್ತು. ಕಳೆದ ಕೇವಲ ಒಂಭತ್ತುವರೆ ವರ್ಷಗಳ ಅವಧಿಯ ಮೋದಿ ನೇತೃತ್ವದ ಸರ್ಕಾರದ ಅದ್ವಿತೀಯ ಕಾರ್ಯಗಳು ಇಡೀ ವಿಶ್ವವೇ ಭಾರತವನ್ನು ವಿಶ್ವ ಗುರುವಾಗಿ ನೋಡುವ ಪರಿಸ್ಥಿತಿಯನ್ನು ನಿರ್ಮಿಸಿದೆಯೆಂದು ತಿಳಿಸಿದರು.
ವೇದಿಕೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ರಾಜ್ಯ ಕಾರ್ಯಕಾರಿಣಿ ಸದಸ್ಯಾದ ರೀನಾ ಪ್ರಕಾಶ್, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಉಪಸ್ಥಿತರಿದ್ದರು.

ಡೀನಾ ಮತ್ತು ಹೇಮಾವತಿ ಪ್ರಾರ್ಥಿಸಿದರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲ್ಲೂರಿಕೊಪ್ಪ ಮಾದಪ್ಪ ಸ್ವಾಗತಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!