April 11, 2026
Saturday, April 11, 2026
spot_img

ಸಚಿವರ ಕಾರ್ಯವೈಖರಿಗೆ ಕಾಂಗ್ರೆಸ್ ಶಾಸಕರ ಅಸಮಾಧಾನ: ಸಂಪುಟದಿಂದ ಕೈಬಿಡಬೇಕೆಂಬ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲ ಸಚಿವರ ವಿರುದ್ಧ ಆಡಳಿತ ಪಕ್ಷದ ಶಾಸಕರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸದನಕ್ಕೆ ನಿಯಮಿತವಾಗಿ ಹಾಜರಾಗದೇ ಇರುವುದಲ್ಲದೆ ಶಾಸಕರ ಸಮಸ್ಯೆಗಳಿಗೆ ಸ್ಪಂದಿಸದ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕರು ಒತ್ತಾಯಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಹಲವರು ಮಾತನಾಡಿ, ಅನಿವಾರ್ಯ ಕಾರಣವಿಲ್ಲದೆ ಕೆಲ ಸಚಿವರು ಅಧಿವೇಶನಕ್ಕೆ ಗೈರುಹಾಜರಾಗುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಮುಖ್ಯಮಂತ್ರಿಯೇ ಸದನದಲ್ಲಿ ಕಡ್ಡಾಯವಾಗಿ ಇರಬೇಕೆಂದು ಸೂಚಿಸಿದ್ದರೂ ಕೆಲವರು ಅದನ್ನು ಪಾಲಿಸುತ್ತಿಲ್ಲ ಎಂದು ಶಾಸಕರು ದೂರಿದರು. ಜೊತೆಗೆ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬವಾಗುತ್ತಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಎಸ್ಟಿ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಗ್ಯಾಸ್ ಬೆಲೆ ಏರಿಕೆ ವಿಷಯದಲ್ಲಿ ಬಿಜೆಪಿ ವಿರುದ್ಧ ಸದನದಲ್ಲಿ ತೀವ್ರವಾಗಿ ಧ್ವನಿ ಎತ್ತುವಂತೆ ಶಾಸಕರಿಗೆ ಸೂಚಿಸಿದರು.

ಸಭೆಯಲ್ಲಿ ಕೆಲ ಕ್ಷಣ ಗದ್ದಲದ ವಾತಾವರಣವೂ ನಿರ್ಮಾಣವಾಯಿತು. ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳುವುದಿಲ್ಲ ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ದೂರಿದರೆ, ಶೃಂಗೇರಿ ಶಾಸಕ ರಾಜೇಗೌಡ ಅಧಿಕಾರಿಗಳ ಪರವಾಗಿ ಮಾತನಾಡಿದರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ನಾರಾಯಣಸ್ವಾಮಿ ಸಭೆಯಿಂದ ಹೊರನಡೆದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !