May 2, 2026
Saturday, May 2, 2026
spot_img

ದಾವಣಗೆರೆ ರಿಸಲ್ಟ್ ಮೇಲೆ ನಿಂತಿದೆ ಜಮೀರ್ ಭವಿಷ್ಯ: ಶಿಸ್ತು ಕ್ರಮದ ಕತ್ತಿ ಯಾರ ಕೊರಳಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಏನೋ ಮುಗಿದಿದೆ, ಆದರೆ ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನದ ಪರ್ವ ಮಾತ್ರ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಆರಂಭವಾದ ಮುಸ್ಲಿಂ ಸಮುದಾಯದ ಮುನಿಸು ಈಗ ಬಹಿರಂಗ ಸಂಘರ್ಷಕ್ಕೆ ನಾಂದಿ ಹಾಡಿದೆ.

ಅಲ್ಪಸಂಖ್ಯಾತರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಎಂಎಲ್‌ಸಿ ಅಬ್ದುಲ್ ಜಬ್ಬಾರ್, ಇದೀಗ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹೈಕಮಾಂಡ್‌ಗೆ ನೇರ ಸಂದೇಶ ರವಾನಿಸಿದ್ದಾರೆ. ಇವರ ಜೊತೆಗೆ ಸಚಿವ ಜಮೀರ್ ಅಹ್ಮದ್ ಅವರ ನಡೆ ಕೂಡ ಈಗ ಪಕ್ಷದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಪಕ್ಷದ ಅಭ್ಯರ್ಥಿ ಪರವಾಗಿ ಸಕ್ರಿಯವಾಗಿ ಪ್ರಚಾರ ನಡೆಸದ ಸಚಿವ ಜಮೀರ್ ಅಹ್ಮದ್ ವಿರುದ್ಧ ಸ್ವತಃ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಮುಸ್ಲಿಂ ನಾಯಕರನ್ನು ಒಗ್ಗೂಡಿಸುವಲ್ಲಿ ಜಮೀರ್ ವಿಫಲರಾಗಿದ್ದಾರೆ ಮತ್ತು ಪ್ರಚಾರದ ವೇಳೆ ಅವರ ಉದಾಸೀನತೆ ಎದ್ದು ಕಾಣುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

ಚುನಾವಣಾ ಫಲಿತಾಂಶದ ನಂತರ ಎಸ್‌ಡಿಪಿಐ ಮತ್ತು ಪಕ್ಷೇತರ ಅಭ್ಯರ್ಥಿಗಳು ಪಡೆಯುವ ಮತಗಳ ಆಧಾರದ ಮೇಲೆ ಬಂಡಾಯಗಾರರ ವಿರುದ್ಧ ಕ್ರಮ ಕೈಗೊಳ್ಳಲು ಒಂದು ಬಣ ಪಟ್ಟು ಹಿಡಿದಿದೆ. ಇದು ‘ರಾಜಣ್ಣ ಕೇಸ್’ನಂತೆ ತಿರುವು ಪಡೆಯುತ್ತಾ ಅಥವಾ ಜಮೀರ್ ಈ ಚಕ್ರವ್ಯೂಹದಿಂದ ಪಾರಾಗುತ್ತಾರಾ? ಎಂಬುದು ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ, ದಾವಣಗೆರೆ ಉಪಚುನಾವಣೆ ಕಾಂಗ್ರೆಸ್‌ನೊಳಗಿನ ‘ಪವರ್ ಫೈಟ್’ ಮತ್ತು ಮುಸ್ಲಿಂ ನಾಯಕತ್ವದ ಪೈಪೋಟಿಗೆ ಹೊಸ ವೇದಿಕೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !