ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನನ್ನನ್ನು ಅಗತ್ಯಕ್ಕೆ ಬಳಸಿಕೊಂಡು ಹೇಗೆ ಕೈಬಿಟ್ಟಿತು ಎಂಬುದನ್ನು ನೋಡಿದ್ದೇನೆ. ಕರ್ನಾಟಕದಲ್ಲಿ ಜೆಡಿಎಸ್ ಭವಿಷ್ಯವನ್ನು ಮುಗಿಸಲು ಕಾಂಗ್ರೆಸ್ ಪ್ಲಾನ್ ಮಾಡುತ್ತಲೇ ಇದೆ. ನಾನು ವಿರೋಧ ಪಕ್ಷಗಳ ಮೈತ್ರಿಕೂಟದ ಬಣ ಸೇರಿಕೊಳ್ಳಲು ನಿರಾಕರಿಸಿದ್ದಕ್ಕೆ ಆ ಬಣದಲ್ಲಿ ಕಾಂಗ್ರೆಸ್ ಕೂಡ ಇರುವುದೇ ಕಾರಣ. ನಾನೇ ರಾಜಕೀಯಕ್ಕೆ ಕರೆದುಕೊಂಡುಬಂದ ವ್ಯಕ್ತಿ ಸಿದ್ದರಾಮಯ್ಯ. ಆದರೆ, ಅವರೇ ಒಂದುವೇಳೆ ಕಾಂಗ್ರೆಸ್ ಜೊತೆ ಜೆಡಿಎಸ್ ಬಂದರೆ ನಾನು ಹೊರನಡೆಯುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆ ಬಗ್ಗೆ ನನಗೆ ಮಾತನಾಡಲು ಮನಸಿಲ್ಲ. ನಾನು ಕಾಂಗ್ರೆಸ್ನಿಂದ ಬಹಳಷ್ಟು ನೋವು ಅನುಭವಿಸಿಬಿಟ್ಟಿದ್ದೇನೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ಟಿವಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಎಚ್ಡಿ ದೇವೇಗೌಡ, ಜೆಡಿಎಸ್ ಪಕ್ಷವನ್ನು ತಮ್ಮ ಜೆಡಿಯು ಜೊತೆ ವಿಲೀನಗೊಳಿಸಲು ಹಾಗೂ ವಿರೋಧ ಪಕ್ಷಗಳ ಬಣವಾದ ಐಎನ್‌ಡಿಐಎ ಸೇರಲು ನನಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಹ್ವಾನ ನೀಡಿದ್ದರು. ಆದರೆ, ಅದನ್ನು ನಾನು ನಿರಾಕರಿಸಿದ್ದೆ. ಜನತಾದಳದ ಹಳೆಯ ಪಕ್ಷಗಳನ್ನು ಒಳಗೊಂಡ ‘ಜನತಾ ಫ್ರೀಡಂ ಫ್ರಂಟ್’ ರಚನೆಯ ಬಗ್ಗೆ 4 ತಿಂಗಳ ಹಿಂದೆ ನನ್ನ ಬಳಿ ಪ್ರಸ್ತಾಪ ಮಾಡಿದ್ದರು. ಅದಕ್ಕೆ ನಾನು ಒಪ್ಪಲಿಲ್ಲ. ನನಗೆ ರಾಷ್ಟ್ರೀಯ ಹುದ್ದೆಗಳಲ್ಲಿ ಯಾವುದೇ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.
ನನ್ನ ಮನವೊಲಿಸಲು ನಿತೀಶ್ ಕುಮಾರ್ ತಮ್ಮ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ಕಳುಹಿಸಿದ್ದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ನಿಮಗೆ ಇಚ್ಛೆಯಿದ್ದರೆ ನೀವು ಇತರ ಪಕ್ಷಗಳನ್ನು ಬೇಕಾದರೆ ಸಂಪರ್ಕಿಸಬಹುದು. ಆದರೆ, ನನಗೆ ಈ ವಿಲೀನದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿ ಕಳುಹಿಸಿದ್ದೆ ಎಂದಿದ್ದಾರೆ.
ಬಿಜೆಪಿ- ಜೆಡಿಎಸ್ ನಡುವೆ ಸೀಟು ಹಂಚಿಕೆ ಕುರಿತ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಅಕ್ಟೋಬರ್ 24ರಂದು ದಸರಾ ನಂತರ ಈ ಬಗ್ಗೆ ಮಾತುಕತೆಗಳು ಪ್ರಾರಂಭವಾಗಲಿವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.