ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ: ರಾಹುಲ್‌, ಪ್ರಿಯಾಂಕಾ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶುಕ್ರವಾರ ಹಣದುಬ್ಬರ, ಬೆಲೆ ಏರಿಕೆ, ಜಿಎಸ್‌ಟಿ ಮತ್ತು ನಿರುದ್ಯೋಗ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸುತ್ತಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಶಶಿ ತರೂರ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಪೋಲೀಸರು ಬಂಧಿಸಿದ್ದಾರೆ.

ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದರೂ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಅರೆಸೇನಾ ಪಡೆಗಳು ಮತ್ತು ದೆಹಲಿ ಪೊಲೀಸರು ವಿಜಯ್ ಚೌಕ್ ರಸ್ತೆ ಮತ್ತು ಸಂಸತ್ತಿನಿಂದ ರಾಷ್ಟ್ರಪತಿ ಭವನಕ್ಕೆ ಹೋಗುವ ಮಾರ್ಗವನ್ನು ಬ್ಯಾರಿಕೇಡ್‌ಗಳ ಮೂಲಕ ನಿರ್ಬಂಧಿಸಿದ್ದಾರೆ. ಕಾಂಗ್ರೆಸ್ ಸಂಸದರ ಪ್ರತಿಭಟನೆಯನ್ನು ತಡೆಯಲು ಮಹಿಳಾ ಅರೆಸೇನಾ ಸಿಬ್ಬಂದಿ ಬ್ಯಾರಿಕೇಡ್‌ಗಳ ಇನ್ನೊಂದು ಬದಿಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅವರು ಪ್ರಧಾನಿ ಭವನವನ್ನು ಘೇರಾವ್ ಮಾಡಲು ಕೂಡ ಯೋಜಿಸಿದ್ದಾರೆ. ಇದೇ ವೇಳೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದಲ್ಲಿ ಈಗ ಪ್ರಜಾಪ್ರಭುತ್ವ ಇಲ್ಲ, ನಮ್ಮ ದೇಶ ಇಬ್ಬರ ಸರ್ವಾಧಿಕಾರದಲ್ಲಿದೆ. ಬೆಲೆ ಏರಿಕೆ ನಿರುದ್ಯೋಗದ ವಿರುದ್ಧ ಪ್ರತಿಪಕ್ಷಗಳು ಧ್ವನಿ ಎತ್ತದಂತೆ ಅವರನ್ನು ತಡೆಯಲಾಗುತ್ತಿದೆ” ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಅವರನ್ನು ಹಿಟ್ಲರ್‌ ಆಡಳಿತಕ್ಕೆ ಹೋಲಿಕೆ ಮಾಡಿದ್ದಾರೆ.

ಹಣದುಬ್ಬರ ಮಿತಿ ಮೀರಿ ಏರಿಕೆಯಾಗಿದ್ದು, ಈ ಬಗ್ಗೆ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. “ಇದಕ್ಕಾಗಿಯೇ ನಾವು ಹೋರಾಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, “ಕಳೆದ 3 ತಿಂಗಳಿಂದ ಕಾಂಗ್ರೆಸ್ ಅಧ್ಯಕ್ಷರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯನ್ನು ಘೋಷಿಸಿದಾಗಿನಿಂದ ಈ ಜನರು ಕಾಂಗ್ರೆಸ್ ಪಕ್ಷ ಮತ್ತು ನಮ್ಮ ವಿರುದ್ಧ ಸೇಡು ಮತ್ತು ಭಯದ ವಿಷದ ರಾಜಕಾರಣವನ್ನು ತೀವ್ರಗೊಳಿಸಿದ್ದಾರೆ. ಇದು ಕೇವಲ ಕಾಕತಾಳೀಯವಲ್ಲ.” ಎಂದಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಮಾತನಾಡಿ, ಈ ಪ್ರತಿಭಟನೆಯು ಬೆಲೆ ಏರಿಕೆ ಮತ್ತು ಅಗ್ನಿಪಥಕ್ಕೆ ಸಂಬಂಧಿಸಿದೆ. ಬೆಲೆ ಏರಿಕೆಯು ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ. ರಾಜಕೀಯ ಪಕ್ಷವಾಗಿ ಮತ್ತು ಚುನಾಯಿತ ಪ್ರತಿನಿಧಿಯಾಗಿ, ನಾವು ಜನರ ಕುಂದುಕೊರತೆಗಳು, ಹೊರೆಗಳು ಮತ್ತು ಭಯಗಳಿಗೆ ಧ್ವನಿ ನೀಡಲು ಬದ್ಧರಾಗಿದ್ದೇವೆ ಎಂದಿದ್ದಾರೆ.

ದೆಹಲಿಯ ವಿಜಯ್‌ ಚೌಕ್‌ ಬಳಿ ಕಾಂಗ್ರೆಸ್‌ ಮುಖಂಡರನ್ನು ತಡೆಹಿಡಿಯಲಾಗಿದ್ದು ಹಲವು ಮುಖಂಡರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ದೇಶವ್ಯಾಪಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು ಕಾಶ್ಮೀರ, ಬಿಹಾರ, ಹೈದ್ರಾಬಾದ್‌ ಸೇರಿದಂತೆ ವಿವಿಧೆಡೆ ಪ್ರತಿಭಟನೆಗಳು ವರದಿಯಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!