Saturday, March 25, 2023

Latest Posts

ಕಾಂಗ್ರೆಸ್ ಜನರನ್ನ ನರಕದಲ್ಲಿ ಇಟ್ಟಿದಕ್ಕೆ ಅವರನ್ನು ಮನೆಗೆ ಕಳುಹಿಸಿದ್ದಾರೆ : ಸಿಎಂ

ಹೊಸದಿಗಂತ ವರದಿ ಹುಬ್ಬಳ್ಳಿ:

ಕಾಂಗ್ರೆಸ್ ನವರು ಜನರನ್ನ ನರಕದಲ್ಲಿ ಇಟ್ಟಿದಕ್ಕೆ ಅವರನ್ನು ಮನೆಗೆ ಕಳುಹಿಸಿದ್ದಾರೆ. ಅತ್ಯಂತ ಬೇಜವಾಬ್ದಾರಿ ವಿರೋಧ ಪಕ್ಷವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರಿಹಾಯ್ದರು.

ಶೇ.40 ರಷ್ಟು ಕಮಿಷನ್ ಪಡೆಯುವ ಬಿಜೆಪಿ ಅವರಿಗೆ ವಿಶೇಷ ನರಕ ಸೃಷ್ಟಿಸಬೇಕು ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ್ ಅವರು ಹೇಳಿಕೆಗೆ ಸಿಎಂ‌ ಬೊಮ್ಮಾಯಿ‌ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಜನರಿಗೆ ತಮ್ಮ ಸಾಧನೆ ಹಾಗೂ ಸರ್ಕಾರದ ವೈಫಲ್ಯ ತೊರಿಸುವ ಬದಲು ಈ ರೀತಿ ಹೇಳಿಕೆಗಳು ನೀಡುತ್ತಿರುವುದು ಜನರ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ಎಂದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ್ ಅವರಿಗೆ ಕರ್ನಾಟಕ ಬಗ್ಗೆ ಸ್ವಲ್ಪವೂ ಮಾಹಿತಿಯಿಲ್ಲ. ಮೊದಲು ಅವರು ಕಾಂಗ್ರೆಸ್ ಒಳಜಗಳ ಸರಿಪಡಿಸಿಕೊಳ್ಳಲಿ. ಬಳಿಕ ಕರ್ನಾಟಕ ಬಗ್ಗೆ ಮಾತನಾಡಲಿ ಎಂದು ಏಕವಚನದಲ್ಲಿಯೇ ಕುಟುಕಿದರು.

ಕಾಂಗ್ರೆಸ್ ನವರ ಅಸುರ, ಭ್ರಷ್ಟಾಚಾರಸೂರ‌ ಎಂಬ ಮಾತಿಗಳಿಂದ ಏನು ಆಗುವುದಿಲ್ಲ. ಜನರಿಗೆ ಎಲ್ಲವೂ ಗೊತ್ತಿದೆ. ಯಾರು ಅಸುರರು? ಯಾರು ಭ್ರಷ್ಟಾಸೂರರು ಎಂದು. 70 ವರ್ಷ ದೇಶ
ಆಳಿದ ಕಾಂಗ್ರೆಸ್ ಕಿತ್ತೊಗೆದು ಅಸುರರು ಯಾರು ಎಂದು ಜನ ತೊರಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಅಸುರರ ದೊಡ್ಡ ಪಟ್ಟಿ ಇದೆ ಎಂದು ಹೇಳಿದರು.

ಕಾಂಗ್ರೆಸ್ ನವರು ಚುನಾವಣೆಗಾಗಿ ಜನರಿಗೆ ಆಕಾಶ ತೊರಿಸಿ ಮರಳು ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಬಿಜೆಪಿ ಯೋಜನೆಗಳು ಸ್ಪಷ್ಟವಾಗಿವೆ. ಗೃಹ ಶಕ್ತಿ ನೀಡುತ್ತೇನೆ ಎಂದು ಘೋಷಿಸಿದ ಬಳಿಕ ಅವರು ಗೃಹ ಲಕ್ಷ್ಮೀ ಯೋಜನೆ ಘೋಷಿಸಿ ನಮ್ಮ ಯೋಜನೆ ನಕಲು ಮಾಡಿದ್ದಾರೆ. ಸುರ್ಜೇವಾಲ್ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದು ಕಿಡಿಕಾರಿದರು.

ಕಳೆದ ಬಾರಿ ಬಜೆಟ್ ಅನುಷ್ಠಾನಕ್ಕೆ ಕಮಿಟಿ ರಚಿಸಲಾಗಿತ್ತು. ಅದೇ ರೀತಿ ಈ ಬಾರಿ ಕಮಿಟಿ ರಚಿಸುತ್ತೇವೆ. ಮಹದಾಯಿ ಯೋಜನೆ ಅನುಷ್ಠಾನದ ಕುರಿತು ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುತ್ತದೆ ಎಂದರು.

ಚುನಾವಣೆ ಬಳಿಕ ಶಾಶ್ವತವಾಗಿ ಕಾಂಗ್ರೆಸ್ ನಾಯಕರ ಕಿವಿಯ ಮೇಲೆ ಹೂ ಇರುತ್ತದೆ ಎಂದು ಕಿವಿ ಮೇಲೆ ಹೂ ಕಾಂಗ್ರೆಸ್ ಅಭಿಯಾನಕ್ಕೆ ಪ್ರತಿಕ್ರಿಯಿಸಿದರು.

ಬಿಹಾರ ಮುಖ್ಯಮಂತ್ರಿ ಮಂತ್ರಿ ನಿತೀಶ ಕುಮಾರ ಎಷ್ಟು ಬಾರಿ ಬಣ್ಣ ಬದಲಾಯಿಸಿದ್ದಾರೆ ಎಲ್ಲರಿಗೂ ಗೊತ್ತೆ ಇದೆ. ಅವರ ಮಾತಿಗೆ ಕಿಮ್ಮತ್ತು ಇಲ್ಲಾ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!