ಕಾಂಗ್ರೆಸ್’ನ ಮತ ಬ್ಯಾಂಕ್ ಕೈ ತಪ್ಪಿದೆ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ

ಹೊಸದಿಗಂತ ವರದಿ, ಮಡಿಕೇರಿ:

ಕಾಂಗ್ರೆಸ್‌ನ ಮತ ಬ್ಯಾಂಕ್ ಅದರ ಕೈ ತಪ್ಪಿದೆ. ಜನರಲ್ಲಿ ನರೇಂದ್ರ ಮೋದಿ ಕುರಿತು ಭ್ರಮ ನಿರಸನವಾಗಿದೆ. ಇದು ಜೆಡಿಎಸ್‌ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಜಾತ್ಯತೀತ ಜನತಾ ದಳ (ಜೆಡಿಎಸ್) ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅಭಿಪ್ರಾಯಪಟ್ಟರು.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಶಾಲನಗರಕ್ಕೆ ಆಗಮಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೀದಿ, ದೇಗುಲ ಕಟ್ಟುವುದು ನಮ್ಮ ಕೆಲಸ ಅಲ್ಲ. ಬಡವರ ಮನೆ ಕಟ್ಟುವುದು ನಮ್ಮ ಕೆಲಸ. ಎಲ್ಲರಿಗೂ ಎಲ್ಲಾ ಕಾಯಿಲೆಗೂ ಉಚಿತ ಚಿಕಿತ್ಸೆ, ಎಲ್ಲರಿಗೂ ಉಚಿತ ಶಿಕ್ಷಣ, ಏರುತ್ತಿರುವ ಬೆಲೆಯನ್ನು ನಿಯಂತ್ರಿಸುವುದು ನಮ್ಮ ಗುರಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಮಗೆ ಮೋದಿ ಹೇಳಿದ ಅಚ್ಚೇ ದಿನ್ ಬೇಡ. ನಮಗೆ ಹಳೆಯ ದಿನಗಳನ್ನು ಅವರು ವಾಪಸ್ ಕೊಟ್ಟರೆ ಸಾಕು. ಈಗ ಪೆಟ್ರೊಲ್‌ ಬೆಲೆ, ಅಡುಗೆ ಎಣ್ಣೆ, ಅಡುಗೆ ಅನಿಲಗಳ ಬೆಲೆಗಳನ್ನು ಹಿಂದೆ ಇದ್ದಷ್ಟು ಮಾಡಿದರೆ ಸಾಕು’ ಎಂದರು. ಒಂದು ವೇಳೆ ಬಿಜೆಪಿಯವರಿಗೆ ನೈತಿಕತೆ ಇದ್ದರೆ ಪೆಟ್ರೋಲ್ ದರವನ್ನು ಲೀಟರ್‌ಗೆ 50 ರೂ.ಗಳಿಗೆ ಇಳಿಸಲಿ ನೋಡೋಣ ಎಂದೂ ಸವಾಲೆಸೆದರು.

ಜಿಎಸ್‌ಟಿ ಹೇರಿಕೆಯಿಂದ ವ್ಯಾಪಾರ ಇಲ್ಲ, ಲಾಭವೂ ಇಲ್ಲ. ಮಸಾಲೆದೋಸೆಗೂ ಜಿಎಸ್‌ಟಿ ಹಾಕಲಾಗಿದೆ. ಎಸಿ ಒಳಗೆ ಒಂದು ಹೊರಗೆ ಮತ್ತೊಂದು. ನಿಜಕ್ಕೂ ಬಡವರ ಸ್ಥಿತಿ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಅಮಾಯಕರು ಸಾಯುತ್ತಿದ್ದಾರೆ. ಕಾಶ್ಮೀರದಲ್ಲೂ ನಿರಂತರ ಸಾವು ನೋವು ಸಂಭವಿಸುತ್ತಿದೆ. ಮುಸ್ಲಿಮರು ಸತ್ತಾಗ ಅವರ ಮನೆಗೆ ಬಿಜೆಪಿಯವರು ಹೋಗುವುದಿಲ್ಲ. ಎಲ್ಲರೂ ಇಂತಿಂತಹ ಜಾತಿಯಲ್ಲೇ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಬಂದಿರುತ್ತೇವಾ ಎಂದು ಪ್ರಶ್ನಿಸಿದ ಅವರು, ‘ನಮ್ಮದು ಮಾನವ ಧರ್ಮ’ ಎಂದು ಪ್ರತಿಪಾದಿಸಿದರು.

ಕನ್ನಡ ನೆಲ, ಜಲ, ಭಾಷೆ ಉಳಿಸಬೇಕು. ಇದಕ್ಕಾಗಿ ರಾಷ್ಟ್ರೀಯ ಪಕ್ಷ ಬಿಟ್ಟು ಜೆಡಿಎಸ್‌ನ್ನು ಜನರು ಬೆಂಬಲಿಸುವ ವಿಶ್ವಾಸ ಇದೆ ಎಂದು ನುಡಿದರು.

ಕೊಡಗಿನ ಎರಡೂ ಕ್ಷೇತ್ರ ಜೆಡಿಎಸ್’ಗೆ: ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ಸಾಧಿಸುವುದು ನಿಶ್ಚಿತ. ಎರಡೂ ವಿಧಾನಸಭಾ ಕ್ಷೇತ್ರದಲ್ಲೂ ಸರ್ವಸಮ್ಮತ ಅಭ್ಯರ್ಥಿಯನ್ನು ಅತಿ ಶೀಘ್ರದಲ್ಲೇ ಘೋಷಿಸಲಾಗುವುದು. ಯಾರೇ ಅಭ್ಯರ್ಥಿಯಾದರೂ ಅವರ ಪರ ಕೆಲಸ ಮಾಡುವುದಾಗಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಗಣೇಶ್ ಸೇರಿದಂತೆ ಎಲ್ಲಾ ಮುಖಂಡರು ಹೇಳಿದ್ದಾರೆ. ಪಕ್ಷದಲ್ಲಿ ಯಾವುದೇ ಒಡಕಿಲ್ಲ ಎಂದು ತಿಳಿಸಿದರು.

ಮುಖಂಡರಾದ ನಾಪಂಡ ಮುತ್ತಪ್ಪ, ಸುರೇಶ್, ಎಚ್.ಡಿ.ಚಂದ್ರು, ಮಹೇಶ್, ಸಿ.ಎಲ್.ವಿಶ್ವ, ರವಿಕುಮಾರ್ ಮತ್ತಿತರರು ಇಬ್ರಾಹಿಂ ಅವರನ್ನು ಬರಮಾಡಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!