ಕೂಡಿಗೆ ಕ್ರೀಡಾ ಶಾಲೆಯ ಅಭಿವೃದ್ಧಿಗೆ 2 ಕೋಟಿ ಅನುದಾನ: ಶಾಸಕ ಅಪ್ಪಚ್ಚು ರಂಜನ್

ಹೊಸದಿಗಂತ ವರದಿ, ಕುಶಾಲನಗರ:

ಕೂಡಿಗೆ ಕ್ರೀಡಾ ಶಾಲೆಯ ಆರಂಭದಿಂದ ಇದುವರೆಗೆ ಇರುವ ಹಳೆಯ ಕಟ್ಟಡಗಳು ಮತ್ತು ವಿದ್ಯಾರ್ಥಿಗಳ ವಸತಿ ನಿಲಯಗಳ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಕ್ರೀಡಾ ಶಾಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ತಯಾರಿಸಲಾಗಿದ್ದು ಹಂತ ಹಂತವಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಅವರು ತಿಳಿಸಿದ್ದಾರೆ.
ಕ್ರೀಡಾ ಶಾಲೆಗೆ ಭೇಟಿ ನೀಡಿದ ಸಂದರ್ಭ ಮಾಹಿತಿ ನೀಡಿದ ಅವರು, ಮುಂದಿನ ದಿನಗಳಲ್ಲಿ ಈ ಅನುದಾನವನ್ನು ಬಳಕೆ ಮಾಡಿಕೊಂಡು ‌ ಕ್ರೀಡಾ ಶಾಲೆಯ ಆವರಣದ ಜಾಗದಲ್ಲಿ ಪದವಿ ಪೂರ್ವ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಈಗಾಗಲೇ ಕ್ರೀಡಾ ಶಾಲೆಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂಡಿಗೆ ಮತ್ತು ಕುಶಾಲನಗರ ಪದವಿ ಪೂರ್ವ ತರಗತಿಗಳಿಗೆ ಹೋಗುತ್ತಿದ್ದಾರೆ. ಆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಪದವಿಪೂರ್ವ ವಸತಿ ನಿಲಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿಗಳನ್ನು ಆರಂಭ ಮಾಡಲಾಗುವುದು ಎಂದರು.

ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿರುವ ಪದವಿ ಕ್ರೀಡಾ ತರಗತಿಗಳನ್ನು ತರೆಯುವ ಬಗ್ಗೆ ಮತ್ತು ಅದಕ್ಕೆ ಸಂಬಂಧಿಸಿದ ಪದವಿ ವಸತಿ ನಿಲಯವನ್ನು ಆರಂಭಿಸುವ ಬಗ್ಗೆ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕ್ರೀಡಾ ಶಾಲಾ ಆವರಣವನ್ನು ಬಿಟ್ಟು ಬೇರೆ ಜಾಗದಲ್ಲಿ ಕ್ರೀಡಾ ಪದವಿ ವಸತಿ ನಿಲಯ ಆರಂಭಿಸುವ ಚಿಂತನೆ ಮಾಡಲಾಗಿದೆ ಎಂದು ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಇದೇ ಸಂದರ್ಭ ತಿಳಿಸಿದರು.

ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯರಾದ ಕೆ ಕೆ ಭೋಗಪ್ಪ, ಚಂದ್ರು ಮೂಡ್ಲಿಗೌಡ, ತಾಲೂಕು ಬಿ ಜೆ ಪಿ ಮಂಡಲ ಉಪಾಧ್ಯಕ್ಷ ಕೆ ವರದ, ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಸಾವಿತ್ರಿ ರಾಜನ್, ಕೂಡುಮಂಗಳೂರು ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ , ಪ್ರಮೀಣ್, ಕೂಡಿಗೆ ಉದ್ಯಮಿ ಕಿಶೋರ್ ಕುಮಾರ್, ಬಸವತ್ತೂರು ಬಿ ಜೆ ಪಿ ಬೂತ್ ಅಧ್ಯಕ್ಷ ಆರ್ .ಕೆ .ಕೃಷ್ಣ, ಕ್ರೀಡಾ ಶಾಲಾ ಮುಖ್ಯೋಪಾಧ್ಯಾಯ ದೇವು ಕುಮಾರ್‌‌, ತರಬೇತುದಾರರಾದ ವೆಂಕಟೇಶ್, ಮಂಜುನಾಥ, ವಿವಿಧ ವಿಭಾಗ ತರಬೇತುದಾರರು ಹಾಗೂ ‌ಪ್ರಮುಖರಾದ ಪ್ರಕಾಶ್, ಧರ್ಮಣ್ಣ ಪ್ರಭು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!