ಹೊಸದಿಗಂತ ವರದಿ,ಮೈಸೂರು:
ಬಿಜೆಪಿ ಹಿಂದೂತ್ವದ ಡ್ಯಾಂ ಎತ್ತರವನ್ನು ಹೆಚ್ಚಿಸಿದೆ. ಎಲ್ಲಾ ಸಮೂದಾಯಗಳನ್ನು ಜೋಡಿಸುವ ಮೂಲಕ ಡ್ಯಾಂನ್ನು ಭದ್ರಪಡಿಸಿದೆ. ಹಾಗಾಗಿ ಕಾಂಗ್ರೆಸ್ ಈ ಡ್ಯಾಂ ಒಡೆಯಲು ಆಗದೆ, ಅದರಲ್ಲಿ ಮುಳುಗಿ ಹೋಗುವುದು ನಿಶ್ಚಿತ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಸೋಮವಾರ ಮೈಸೂರಿನಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಲಿಂಗಾಯಿತ ಡ್ಯಾಂ, ಕಟ್ಟೆ ಒಡೆದಿದೆ. ಹಾಗಾಗಿ ಬಿಜೆಪಿ ಮುಳುಗಲಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರು ನಮ್ಮ ದೇಶವನ್ನ ಒಡೆದು, ಪಾಕಿಸ್ತಾನ, ಬೂತಾನ್, ನೇಪಾಳವನ್ನ ರಾಷ್ಟ್ರಗಳನ್ನಾಗಿ ಮಾಡಿದ್ದಾರೆ. ದಲಿತರನ್ನು ಬಲಗೈ, ಎಡಗೈ ಎಂದು ಒಡೆದು ಆಳುತ್ತಿದ್ದಾರೆ. ಜಾತಿ, ಜಾತಿ, ಸಮುದಾಯಗಳನ್ನ ಎತ್ತಿ ಕಟ್ಟಿ ಒಡೆದು ಆಳಿದ್ದಾರೆ. ವೀರಶೈವ ಲಿಂಗಾಯಿತರನ್ನು ಒಡೆದು, ಅದರ ಫಲವನ್ನೂ ಅನುಭವಿಸಿದ್ದಾರೆ. ಸಮಾಜಗಳನ್ನು, ದೇಶವನ್ನು ಒಡೆಯುವುದನ್ನೇ ತಮ್ಮ ರಾಜಕೀಯ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನವರ ಒಡೆದಾಳುವ ತಂತ್ರಗಾರಿಕೆ ಗೊತ್ತಾಗಿಯೇ ನಾವು ಎಸ್ಸಿ, ಎಸ್ಟಿಗೆ, ವೀರಶೈವ ಲಿಂಗಾಯಿತರು, ಒಕ್ಕಲಿಗರಿಗೆ ಮೀಸಲಾತಿಯನ್ನು ಹೆಚ್ಚಿಸಿದ್ದೇವೆ. ಒಳ ಮೀಸಲಾತಿಯನ್ನು ಜಾರಿಗೊಳಿಸಿದ್ದೇವೆ. ಕೆಂಪೇಗೌಡರ ಪ್ರತಿಮೆ ನಿರ್ಮಾಣ, 600 ಕೋಟಿ ರೂ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಿದ್ದೇವೆ, ಕನಕದಾರ, ವಾಲ್ಮೀಕಿಯವರನ್ನೂ ಜೋಡಿಸಿದ್ದೇವೆ. ಆ ಮೂಲಕ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿದ್ದೇವೆ. ರೈತರಿಗೆ ಬಡ್ಡಿರಹಿತವಾಗಿ 5 ಲಕ್ಷರೂ ತನಕ ಸಾಲ, ಹಾಲು ಉತ್ಪಾಧಕರಿಗೆ 5 ರೂ ಪ್ರೋತ್ಸಾಹ ಧನ ನೀಡಿದ್ದೇವೆ. ಹಿಂದೂತ್ವದ ಡ್ಯಾಂ ಎತ್ತರವನ್ನು ಹೆಚ್ಚಿಸಿ, ಗಟ್ಟಿ ಮಾಡಿ, ಭದ್ರಪಡಿಸಿದ್ದೇವೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಡ್ಯಾಂ ಒಡೆಯಲು ಆಗದೆ, ಅದರಲ್ಲಿ ಮುಳುಗಿ ಹೋಗುವುದು ನಿಶ್ಚಿತ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು; ನನ್ನ ಚಿಕ್ಕಮಗಳೂರು ಕ್ಷೇತ್ರದ ಸೇರಿದಂತೆ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್‌ನವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಕೇಳಿ ಪ್ರಚಾರ ನಡೆಸುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆಯೇ ಇಲ್ಲವೇ ಎಂಬುದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ಮೈತ್ರಿ ಮಾಡಿಕೊಂಡಿಲ್ಲ ಎಂದಾದರೆ ರಾಜಕೀಯ ವ್ಯಭಿಚಾರ ನಡೆಸುತ್ತಿರುವ ತಮ್ಮ ಪಕ್ಷದ ಶಾಸಕರು, ಮುಖಂಡರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಸ್ಲಿಮರು ಬಿಜೆಪಿಯಲ್ಲಿ ವೋಟ್ ಡೆಪಾಸಿಟ್ ಮಾಡಲಿ
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಧರ್ಮ, ಜಾತಿ, ಸಮುದಾಯದವರನ್ನೂ ಒಳಗೊಂಡೇ ಯೋಜನೆಗಳನ್ನು ರೂಪಿಸಿ, ಜಾರಿಗೆ ತರುತ್ತಿದ್ದಾರೆ. ಯೋಜನೆಯಿಂದ ಯಾರನ್ನೂ ಹೊರತುಪಡಿಸಿಲ್ಲ, ಮುಸ್ಲಿಮರಿಗೆ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳ ಫಲ ಬೇಕು, ಆದರೆ ಮೋದಿ ನೇತೃತ್ವದ ಸರ್ಕಾರಕ್ಕೆ ವೋಟ್ ಬೇಡಾ ಎಂದರೆ ಹೇಗೆ. ಕಾಂಗ್ರೆಸ್‌ನಲ್ಲಿ ನಿಮ್ಮ ವೋಟ್ ಡೆಪಾಸಿಟ್ ಇಟ್ಟು, ಬಿಜೆಪಿ ಸರ್ಕಾರದಲ್ಲಿ ಚೆಕ್ ಕೇಳಿದರೆ ಹೇಗೆ. ಮೊದಲು ನಮ್ಮಲ್ಲಿ ವೋಟ್‌ನ್ನು ಡೆಪಾಸಿಟ್ ಮಾಡಿ, ಆ ಮೇಲೆ ಚೆಕ್ ಪಡೆದುಕೊಂಡು ಡ್ರಾ ಮಾಡಿಕೊಳ್ಳಿ. ಕಾಂಗ್ರೆಸ್‌ನವರು ನಿಮ್ಮ ವೋಟ್‌ನ್ನು ತಮ್ಮ ಬ್ಯಾಂಕ್‌ನಲ್ಲಿಟ್ಟುಕೊoಡಿದ್ದಾರೆ. ಆದರೆ ಅವರಿಂದ ನಿಮಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ಈಗ ನಿಮಗೆ ಮನವರಿಕೆಯಾಗಿದೆ. ಹಾಗಾಗಿ ನಮ್ಮ ಪಕ್ಷದಲ್ಲಿ ಬಂದು ಡೆಪಾಸಿಟ್ ಮಾಡಿ ಎಂದರು.
ಜನ ಅಪೇಕ್ಷೆಪಟ್ಟರೆ ನಾನೂ ಸಿಎಂ ಆಗಬಹುದು
ನಾನು ಕೂಡ ರಾಜಕಾರಣಿ, ನನ್ನ ಕ್ಷೇತ್ರದ ಜನರು ನನ್ನನ್ನು ಮುಖ್ಯಮಂತ್ರಿಯಾಗಬೇಕೆoದು ಹೇಳುತ್ತಿದ್ದಾರೆ. ಇದನ್ನು ಇಡೀ ರಾಜ್ಯದ ಜನರು ಹೇಳಿದರೆ, ಅಪೇಕ್ಷೆ ಪಟ್ಟರೆ ಖಂಡಿತವಾಗಿ ನಾನು ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಮೈಸೂರು ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಮಂಗಳಸೋಮಶೇಖರ್, ಪ್ರಧಾನ ಕಾರ್ಯದರ್ಶಿ ದೇವನೂರು ಜಿ.ಪ್ರತಾಪ್, ಸಹ ವಕ್ತಾರ ಡಾ.ಕೆ.ವಸಂತ್ ಕುಮಾರ್, ಮೈಸೂರು ವಿಭಾಗ ಮಾಧ್ಯಮ ಕೇಂದ್ರ ಸಂಯೋಜಕ ನಾಗೇಶ್, ಸಹ ವಕ್ತಾರ ಕೇಬಲ್ ಮಹೇಶ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮಾಧ್ಯಮ ಸಂಚಾಲಕ ಮಹೇಶ್‌ರಾಜೇ ಅರಸ್, ಸಹ ಸಂಚಾಲಕ ಪ್ರದೀಪ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.