ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಇಬ್ಭಾಗವಾಗಲಿದೆ: ನಳಿನ್ ಕುಮಾರ್ ಕಟೀಲ್ ಭವಿಷ್ಯ

ಹೊಸದಿಗಂತ ವರದಿ, ಬೆಂಗಳೂರು:
ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಎರಡು ಹೋಳಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.
ಹಾಸನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಒಳಜಗಳ ಇನ್ನಷ್ಟು ಹೆಚ್ಚಾಗಲಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಸಿದ್ರಾಮಣ್ಣನ ಗುಂಪು ಡಿಕೆಶಿ ಗುಂಪನ್ನು ಮತ್ತು ಡಿಕೆಶಿ ಗುಂಪು ಸಿದ್ರಾಮಣ್ಣನ ಅಭ್ಯರ್ಥಿಗಳನ್ನು ಸೋಲಿಸಲಿದ್ದಾರೆ. ಬಿಜೆಪಿ ವಿಕಾಸಕಾರ್ಯಗಳ ಬಲದಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
60 ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷವು ಯಾವ ರೈತನ ಖಾತೆಗೂ ನೇರವಾಗಿ ಹಣ ಹಾಕಲಿಲ್ಲ. ಹಳ್ಳಿಯ ತಾಯಂದಿರಿಗೆ ಅನಿಲ ಸಿಲಿಂಡರ್ ಭಾಗ್ಯ ಕೊಟ್ಟಿರಲಿಲ್ಲ. ಅವರ ಖಾತೆಗೆ ಹಣ ಹಾಕಿರಲಿಲ್ಲ. ಇವತ್ತು ಮನೆ ಮನೆಗೆ ಬ್ಯಾಂಕ್ ಖಾತೆ, ಶೌಚಾಲಯ ಸೌಲಭ್ಯ, ಮನೆ ಮನೆಗೆ ಗ್ಯಾಸ್ ಸಂಪರ್ಕ, ವಿದ್ಯುತ್ ಸಂಪರ್ಕ ಹಾಗೂ ಆಯುಷ್ಮಾನ್ ಯೋಜನೆ ಮೂಲಕ ಆರೋಗ್ಯ ಭಾಗ್ಯವನ್ನು ನರೇಂದ್ರ ಮೋದಿಯವರ ಸರಕಾರ ಕೊಟ್ಟಿದೆ. ಮನೆ ಮನೆಗೂ ಅದು ನೀರನ್ನು ನೀಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಜಾತಿ, ಮತ, ಪಂಥವನ್ನು ಮೀರಿ ಬಿಜೆಪಿ ಬೆಳೆದಿದೆ. ಹಿಂದೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ರಾಷ್ಟ್ರಪತಿಗಳ ಸ್ಥಾನ ನೀಡಿದ್ದು, ಇದೀಗ ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಏರಿಸಲು ಅದು ಮುಂದಾಗಿದೆ. ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಸದಾ ಗೌರವ ನೀಡಿದೆ. ಜನಮಾನಸದಲ್ಲಿ ಅದು ಅಭೂತಪೂರ್ವವಾದ ವಿಶ್ವಾಸವನ್ನು ಗಳಿಸಿದೆ ಎಂದು ವಿಶ್ಲೇಷಿಸಿದರು.
ಕುಟುಂಬ ರಾಜಕೀಯ, ಜಾತಿ ರಾಜಕೀಯದಲ್ಲಿ ಬಹಳ ವರ್ಷಗಳಿಂದ ಸಿಲುಕಿದ್ದ ಹಾಸನ ಜಿಲ್ಲೆಯು ಇವತ್ತು ಅದ್ಭುತವಾಗಿ ನಮ್ಮ ಸಂಘಟನೆ ಶಕ್ತಿ ಬೆಳೆಯುತ್ತಿದೆ. ಕಮಲ ಇಲ್ಲಿ ಅರಳುತ್ತಿದೆ. ಮುಂದಿನ ದಿನಗಳಲ್ಲಿ ಈ ಜಿಲ್ಲೆಯಲ್ಲಿ ನಮ್ಮ ಶಕ್ತಿ ವೃದ್ಧಿಸಲು ಕೆಲಸ ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ 5 ಸ್ಥಾನ ಪಡೆಯಲಿದ್ದೇವೆ. ಮಂಡ್ಯ ಜಿಲ್ಲೆಯಲ್ಲೂ ನಮ್ಮ ಶಕ್ತಿ ವೃದ್ಧಿ ಆಗಲಿದೆ. ಹಳೆ ಮೈಸೂರು ಭಾಗದಲ್ಲೂ ಪಕ್ಷದ ಬಲ ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಪಾನ್‍ನ ಮಾಜಿ ಪ್ರಧಾನಿ ಹಾಗೂ ಭಾರತದ ಬಗ್ಗೆ ಅಪಾರ ಗೌರವ- ಅಭಿವೃದ್ಧಿಯ ಕಳಕಳಿ ಹೊಂದಿದ್ದ ಶಿಂಜೊ ಅಬೆ ಅವರ ಹತ್ಯೆಯನ್ನು ಖಂಡಿಸಿ, ಅವರ ನಿಧನಕ್ಕೆ ಶ್ರದ್ಧಾಂಜಲಿ ಸಮರ್ಪಿಸಿದರು.
ಹಾಸನ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, 2023ರಲ್ಲಿ ರಾಜ್ಯದಲ್ಲಿ ಮತ್ತು 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾವೆಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯ್ ವರ್ಗಿಯ, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಕೆ.ಸುರೇಶ್ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಪಕ್ಷದ ಎಲ್ಲ ಆಹ್ವಾನಿತ ಪ್ರಮುಖರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!