ಹೊಸದಿಗಂತ ವರದಿ ಬೆಂಗಳೂರು:
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಬಿಜೆಪಿಯಿಂದ ತೊಂದರೆಯಾಗಿಲ್ಲ. ಮೀಸಲಿಗೆ ಕುತ್ತು ಎದುರಾಗಿದ್ದು ಕಾಂಗ್ರೆಸ್‌ನಿಂದಲೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರದ ನಡೆಯಿಂದ ಹಿಂದುಳಿದ ವರ್ಗಗಳಿಗೆ ಮೀಸಲು ತಪ್ಪುತ್ತಿದೆ ಎಂಬ ಸಿದ್ದರಾಮಯ್ಯ ಆರೋಪ ಶುದ್ಧ ಸುಳ್ಳು. ಅವರು ಸುಳ್ಳನ್ನೇ ಮನೆ ದೇವರನ್ನಾಗಿಸಿದ್ದಾರೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೋಗಿಲ್ಲ. ಮಹಾರಾಷ್ಟ್ರ ಪ್ರಕರಣದಲ್ಲಿ ನೀಡಿದ ತೀರ್ಪು ಇಡೀ ದೇಶದ ಮೇಲೆ ಪರಿಣಾಮ ಬೀರಿದೆ ಎಂದರು.
ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲು ಕುರಿತು ನಿಖರ ಅಂಕಿ-ಅಂಶಗಳನ್ನು ಮಹಾರಾಷ್ಟ್ರ ಸರ್ಕಾರ ಮಂಡಿಸಿ, ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥಿಸಿಕೊಂಡಿದ್ದರೆ ಈ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ. ಮಹಾರಾಷ್ಟ್ರದಲ್ಲಿರುವುದು ಕಾಂಗ್ರೆಸ್ ಬೆಂಬಲಿತ ಸರ್ಕಾರ. ಹಿಂದುಳಿದ ವರ್ಗಗಳ ಮೀಸಲು ದುಸ್ಥಿತಿಗೆ ಕಾಂಗ್ರೆಸ್ಸೇ ಕಾರಣ ಎಂದು ಸಿ.ಟಿ.ರವಿ ಆರೋಪಿಸಿದರು.