ಬದಲಾದ ಭಾರತವನ್ನು ನೋಡುವ ಅವಕಾಶ ಭಾರತಜೋಡೋ ಮೂಲಕ ಕಾಂಗ್ರೆಸ್ಸಿಗರಿಗೆ ಸಿಗಲಿದೆ: ಸಿ.ಟಿ. ಮಂಜುನಾಥ್

ಹೊಸದಿಗಂತ ವರದಿ ಮಂಡ್ಯ :

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಸ್ವಾಗತಿಸಿ, ಈಗಲಾದರೂ ಇಂತಹ ಮಹತ್ಕಾರ್ಯವನ್ನು ಕಾಂಗ್ರೆಸ್ ಮಾಡಲು ಹೊರಟಿದೆ. ಇದರಿಂದ ಆತ್ಮನಿರ್ಭರ ಭಾರತದ ಸತ್ಯದರ್ಶನವಾಗಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ತಿಳಿಸಿದ್ದಾರೆ.
ಹಿಂದೆಲ್ಲ ರಾಜ ಮಹಾರಾಜರು ತಮ್ಮ ದೇಶ ಪರ್ಯಟನೆಗೆ ಮಾರುವೇಷದಲ್ಲಿ ತೆರಳಿ ಜನರ ಸಂಕಷ್ಟ ಮತ್ತು ಸುಭಿಕ್ಷೆಯ ಕುರಿತು ಪರಿಚಯ ಮಾಡಿಕೊಳ್ಳುತ್ತಿದ್ದರು. ರಾಹುಲ್ ಗಾಂಧಿಗೆ ಈ ಯಾತ್ರೆಯ ಮೂಲಕ ಪ್ರಸಕ್ತ ಭಾರತದ ಸ್ಥಿತಿಗತಿಯ ಪರಿಚಯ, ಭಾರತ ಮೋದಿಯವರ ನೇತೃತ್ವದಲ್ಲಿ ಎಷ್ಟೆಲ್ಲ ಅಭಿವೃದ್ಧಿ ಹೊಂದಿದೆ ಎಂಬುದರ ಅರಿವು ಅವರಿಗೆ ಯಾತ್ರೆಯ ಮಧ್ಯದಲ್ಲೇ ಆಗಬಹುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ಸಿಗರಿಗೆ ಭಾರತ ಪಾದಯಾತ್ರೆ ಅತ್ಯಂತ ಅವಶ್ಯವಾಗಿತ್ತು. ಬದಲಾದ ಭಾರತವನ್ನು ಕಣ್ಣಾರೆ ಕಾಣುವ ಅವಕಾಶ ಇದರಿಂದ ಅವರಿಗೆ ಸಿಗಲಿದೆ. ಭಾರತ ಹೇಗೆಲ್ಲಾ ಬದಲಾಗಿದೆ, ಹೇಗೆಲ್ಲ ಪರಿವರ್ತನೆಗಳು ನಡೆದಿವೆ, ಹೇಗೆ ಭ್ರಷ್ಟಾಚಾರ ಮುಕ್ತವಾಗಿದೆ, ಹೇಗೆ ಡಿಜಿಟಲ್ ಕ್ರಾಂತಿ ಆಗಿದೆ, ಹೇಗೆಲ್ಲ ಸಾಮಾನ್ಯ ವ್ಯಕ್ತಿಗಳು ಸ್ವಾವಲಂಭಿಯಾಗಿ ಆತ್ಮನಿರ್ಭರತೆಯಿಂದ ಬದುಕುತ್ತಿದ್ದಾನೆ, ಈ ದೇಶ ಕೋವಿಡ್ ಮುಕ್ತವಾಗಿದೆ, ಭಾರತವು ಜಗತ್ತಿನ ರಾಜಕೀಯ ರಂಗದೊಳಗೆ ಇಷ್ಟೊಂದು ಬಲವಾಗಿದೆ ಎನ್ನುವುದರ ಪ್ರತ್ಯಕ್ಷ ಅನುಭವ ಮತ್ತು ಅನಾವರಣ ರಾಹುಲ್ ಗಾಂಧಿಯವರಿಗೆ ಆಗಲಿದೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿಯವರ ಮಹತ್ವಾಕಾಂಕ್ಷೆಯ ರಾಜಕೀಯ ಜೀವನದ ಬಹು ಎತ್ತರಕ್ಕೆ ಹೋಗಬೇಕಿದೆ. ಆದಷ್ಟು ಬೇಗ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಪದವಿಯನ್ನು ಏರಬೇಕಿದೆ. ತನ್ಮೂಲಕ ದೇಶದಲ್ಲಿ ಒಂದು ಬಲಿಷ್ಠ ವಿರೋಧ ಪಕ್ಷವೂ ನಮಗೆ ಬೇಕಿದೆ. ಮಾಜಿ ಪ್ರಧಾನಿ ನೆಹರು ಅವರು ಮಾಡಿದ ಅನೇಕ ತಪ್ಪು ನಿರ್ಧಾರಗಳಿಂದಾಗಿ ಭಾರತದಿಂದ ಬೇರೆ ಬೇರೆ ಪ್ರದೇಶಗಳು ದೂರ ಹೋದವು ಎಂಬ ಸತ್ಯದ ಅರಿವು ರಾಹುಲ್‌ಗಾಂಧಿಯವರಿಗೆ ಆಗಬೇಕಿದೆ. ಸ್ವಲ್ಪ ಪ್ರಯತ್ನ ಮಾಡಿದ್ದರೂ ಲಾಹೋರ್, ಬಲೂಚಿಸ್ತಾನ ನಮ್ಮ ದೇಶದೊಳಗೇ ಇರುತ್ತಿತ್ತು. ಬಾಂಗ್ಲಾ ದೇಶದ ಉದಯದ ವೇಳೆ ಮನಸ್ಸು ಮಾಡಿದ್ದರೆ ಅನೇಕ ಪ್ರದೇಶಗಳು, ನಾನಕ ದೇವರ ಜಾಗ (ಭೋಯಿ ಕಿ ತಲವಂಡಿ) ಭಾರತಕ್ಕೇ ಸರಿಸಬಹುದಿತ್ತು. ಜೋಡಣೆಯ ಮನಸ್ಸನ್ನು ಅಂದೇ ಮಾಡಬಹುದಿತ್ತು ಎಂದು ಅವರು ಅಭಿಪ್ರಾಯಿಸಿದ್ದಾರೆ.

500ವರ್ಷಕ್ಕೂ ಹೆಚ್ಚು ಕಾಲ ದಾಸ್ಯದಲ್ಲಿದ್ದ ಶ್ರೀರಾಮನ ಜನ್ಮಸ್ಥಳದಲ್ಲಿ ಭವ್ಯ ರಾಮಮಂದಿರ ನಿರ್ಮಿಸುವ ಮೂಲಕ ಭಾರತದ ಎಲ್ಲ ಪ್ರದೇಶವನ್ನೂ ಜೋಡಿಸುವ ಕೆಲಸ ಮಾಡುತ್ತಿದ್ದೇವೆ. ಭಾರತವನ್ನು 3 ಬಾರಿ ಪರ್ಯಟನೆ ಮಾಡಿದ ಆದಿಶಂಕರಾಚಾರ್ಯರ ಪ್ರತಿಮೆಯನ್ನು ಕೇದಾರನಾಥದಲ್ಲಿ ಸ್ಥಾಪಿಸಿ ಹಿಂದೂಗಳ ಭಾವನೆಯನ್ನು ಅರಳಿಸುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್‌ನಿಂದ ಕಡೆಗಣಿಸಲ್ಪಟ್ಟ ಸಂವಿಧಾನ ಕರ್ತೃ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಂಚತೀರ್ಥಗಳನ್ನು ಅಭಿವೃದ್ಧಿಪಡಿಸುವ ಮೂಲಕ ಎಲ್ಲ ಮನಸ್ಸುಗಳನ್ನೂ ಜೋಡಿಸುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ರಾಹುಲ್‌ಗಾಂಧಿಯವರಿಗೆ ಈಗ ಜ್ಞಾನೋದಯವಾಗಿದೆ. ಕಾಂಗ್ರೆಸ್ ಪಕ್ಷದ ಹಳೆಯ ಮತ್ತು ದಶಕಗಳ ಕಾಲ ಇದ್ದ ತನ್ನ ಕಾರ್ಯಕರ್ತರನ್ನು ಮರು ಜೋಡಣೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಹಳೆಯ ನಾಯಕರು ತೊರೆಯುತ್ತಿರುವ ಸಂದರ್ಭದಲ್ಲಿ ಇಂತಹ ಕೆಲಸವೂ ಆಗಬೇಕಿದೆ. ಇದರಿಂದ ರಾಹುಲ್‌ಗಾಂಧಿಯವರು ಭಾರತ ಜೋಡೋ ಹಮ್ಮಿಕೊಂಡಿರುವುದಕ್ಕೆ ಸಾರ್ಥಕವಾಗುತ್ತದೆ. ಜೊತೆಗೆ ಭಾರತಕ್ಕೆ ಸಮರ್ಥ ವಿರೋಧ ಪಕ್ಷವೂ ಹೊರ ಹೊಮ್ಮಲಿದೆ ಎಂದು ಅಭಿಪ್ರಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!